ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿದ್ಯಾರ್ಥಿಗಳು ಪ್ರಶ್ನಿಸುವ, ವಿಚಾರಿಸುವ ಹಾಗೂ ಸತ್ಯಾಸತ್ಯತೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಿಶೀಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಗರ್ತಿಕೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಗೇಶ್ ಸೋಮಯಾಜಿ ಶಿಕಾರಿಪುರದಲ್ಲಿ (Shikaripura) ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳಾದ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ, ವಿದ್ಯಾ ಭಾರತಿ ಕರ್ನಾಟಕ ಶಿವಮೊಗ್ಗ ಘಟಕದ ವತಿಯಿಂದ ಆಯೋಜಿಸಿದ್ದ ಎರಡನೇ ದಿನದ ಜಿಲ್ಲಾ ಗಣಿತ–ವಿಜ್ಞಾನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಪಠ್ಯಪುಸ್ತಕಕ್ಕೆ ಸೀಮಿತವಾಗಬಾರದು
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವಲ್ಲಿ ಇಂತಹ ಗಣಿತ–ವಿಜ್ಞಾನ ಮೇಳಗಳು ಮಹತ್ವದ ಪಾತ್ರ ವಹಿಸುತ್ತವೆ. ವಿಜ್ಞಾನವು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧನವಾಗಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಂದು ವಿಷಯವನ್ನು ತರ್ಕ, ಪ್ರಯೋಗ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಅರ್ಥೈಸಿಕೊಳ್ಳುವ ಅಭ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಪ್ರಶ್ನಿಸುವ, ವಿಚಾರಿಸುವ ಮತ್ತು ಹೊಸತನವನ್ನು ಅರಿಯುವ ಮನೋಭಾವವು ವಿದ್ಯಾರ್ಥಿಗಳಲ್ಲಿ ಬೆಳೆದಾಗ ಮಾತ್ರ ವೈಜ್ಞಾನಿಕ ಚಿಂತನೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು.
ಮೂಢನಂಬಿಕೆಗಳಿಂದ ದೂರವಿರಿ
ಮೂಢನಂಬಿಕೆಗಳಿಂದ ದೂರವಾಗಿ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳುವುದರ ಜೊತೆಗೆ, ಹೊಸ ವಿಚಾರಗಳನ್ನು ಅನ್ವೇಷಿಸುವ, ವಿವಿಧ ಪ್ರಯೋಗಗಳನ್ನು ನಡೆಸುವ ಹಾಗೂ ಸೃಜನಶೀಲವಾಗಿ ಯೋಚಿಸುವ ಗುಣವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ನಾಗೇಶ್ ಸೋಮಯಾಜಿ ಸಲಹೆ ನೀಡಿದರು.
ಇಂತಹ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯೇ ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳು, ಸಂಶೋಧಕರು ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ
ಕಾರ್ಯಕ್ರಮದಲ್ಲಿ ಉಪಸ್ಥಿತಿಯ ನುಡಿಗಳನ್ನಾಡಿದ ಶಾಲಾ ಪ್ರಾಚಾರ್ಯ ವಿಶ್ವನಾಥ್ ಪಿ., ಗಣಿತ–ವಿಜ್ಞಾನ ಮೇಳಗಳು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಆಸಕ್ತಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುತ್ತವೆ ಎಂದು ಹೇಳಿದರು.
ಇಂತಹ ಮೇಳಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ಆತ್ಮವಿಶ್ವಾಸ, ವೈಚಾರಿಕತೆ ಹಾಗೂ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಬೆಳೆಯಲು ಸಹಕಾರಿಯಾಗುತ್ತದೆ. ಪುಸ್ತಕದ ಜ್ಞಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ಉತ್ತಮ ಅವಕಾಶ ಒದಗಿಸುತ್ತವೆ ಎಂದು ತಿಳಿಸಿದರು.
Also read>> ವಿಜಯಪುರ : 2 ಮಕ್ಕಳು, 4 ಮಹಿಳೆಯರು ಸೇರಿ ಒಂದೇ ಕುಟುಂಬದ 6 ಶವಗಳು ಕೆರೆಯಲ್ಲಿ ಪತ್ತೆ
9 ಶಾಲೆಗಳ 180 ವಿದ್ಯಾರ್ಥಿಗಳ ಭಾಗಿ
ಜಿಲ್ಲೆಯ ಒಂಬತ್ತು ಶಾಲೆಗಳಿಂದ ಸುಮಾರು 180 ವಿದ್ಯಾರ್ಥಿಗಳು ಗಣಿತ–ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಮಾದರಿಗಳು ಹಾಗೂ ಪ್ರಾಯೋಗಿಕ ಪ್ರದರ್ಶನಗಳನ್ನು ಪ್ರಸ್ತುತಪಡಿಸಿದರು.
ಮೇಳದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ, ವೈಜ್ಞಾನಿಕ ಕುತೂಹಲ ಮತ್ತು ಪ್ರಾಯೋಗಿಕ ಜ್ಞಾನ ಅನಾವರಣಗೊಂಡಿತು. ವಿವಿಧ ಮಾದರಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳು ಹಾಗೂ ವೈಜ್ಞಾನಿಕ ತಿಳುವಳಿಕೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಸಂಸ್ಥೆಯ ಅಧ್ಯಕ್ಷ ಎಂ.ಬಿ. ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಭಾರತಿ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯದರ್ಶಿ ರಾಘವೇಂದ್ರ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂತೀಯ ಪ್ರಮುಖ ನಾಗರಾಜ್ ಅಡಿಗ ಹಾಗೂ ಜಿಲ್ಲಾ ವಿಜ್ಞಾನ ಮೇಳ ಪ್ರಮುಖ ಮಹೇಶ್ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು. ಪ್ರಶಿಕ್ಷಕಿ ಮಮತಾ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ್ ಕುಬಸದ ಸ್ವಾಗತಿಸಿದರು. ಚಂದ್ರಕಲಾ ಕೆ.ಜಿ. ವಂದಿಸಿದರು. ಚಂದ್ರಮತಿ ಎಸ್.ಟಿ. ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







