ಶಿಕಾರಿಪುರ: ಜಿಲ್ಲೆಯ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಹಣ ಬಿಡುಗಡೆ ಮಾಡಿದೆ ಆದರೂ ಅದು ತಮ್ಮ ಸಾಧನೆ ಎಂದು ನೂರು ಸುಳ್ಳು ಹೇಳಿ ಅದು ಸತ್ಯ ಎನ್ನುವುದಕ್ಕೆ ಹೊರಟಿರುವ ಬಿಜೆಪಿಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಜೆಡಿಎಸ್ ಆಯೋಜಿಸಿದ್ದ ಮತಯಾಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಮಾಭಾರತಿ, ಗಡ್ಕರಿ ಅವರಿಗೆ ಮನವಿ ನೀಡಿ ಕೇಂದ್ರದಿಂದ ತಾಲೂಕಿನ ನೀರಾವರಿ ಹಣ ಮಂಜೂರಾಗಿದೆ ಎಂದು ಮೊದಲು ಸುಳ್ಳು ಹೇಳಿದರು. ರಾಜ್ಯ ಸರಕಾರ ಡಿಪಿಆರ್ಗೆ ಹಣ ಬಿಡುಗಡೆ ಮಾಡಿದಾಗ ತಾವೆ ಕಾರ್ಯಕ್ರಮ ನಡೆಸಿ ಅದೂ ತಮ್ಮದೆ ಪರಿಶ್ರಮ ಎಂದರು.
ನೀರಾವರಿ ಯೋಜನೆಗೆ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಲಾಯಿತು ಅದೂ ತಮ್ಮ ಸಾಧನೆ ಎಂದು ಕರಪತ್ರ ಮುದ್ರಿಸಿ ತಮ್ಮ ಪಕ್ಷದ ವತಿಯಿಂದ ತಾವೆ ಅಭಿನಂದನೆ ಸಲ್ಲಿಸಿಕೊಂಡರು. ಇದೊಂದು ಹಾಸ್ಯಾಸ್ಪದ ಸಂಗತಿ ಎಲ್ಲವನ್ನೂ ಜನ ಗಮನಿಸುತ್ತಿದ್ದು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಶಿವಮೊಗ್ಗ ರಾಣೇಬೆನ್ನೂರು ರೈಲು ಬಿಡುತ್ತೇನೆ ಎನ್ನುತ್ತಾ ಆರು ವರ್ಷ ಕಳೆಯಿತು ಇಂದಿಗೂ ಅದು ಮುಂದುವರೆದಿದೆ. ಮೋದಿ ಜನರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರೂ ಅದೂ ಇಲ್ಲ, ಕಪ್ಪುಹಣ ಈವರೆಗೆ ವಾಪಸ್ ಬಂದಿಲ್ಲ ಬದಲಿಗೆ ಇನ್ನಷ್ಟು ಜನರು ದೇಶದ ಬ್ಯಾಂಕ್ಗೆ ನಾಮಹಾಕಿ ದೇಶಬಿಟ್ಟು ಹೋಗಿದ್ದಾರೆ. ಕೇಂದ್ರ ಸರಕಾರ ದೇಶದ ಉದ್ದಿಮೆದಾರರ ಸಾಲಮನ್ನಾ ಮಾಡಿದೆ. ರೈತರ ನೆರವಿಗೆ ಯಾವುದೇ ಯೋಜನೆ ರೂಪಿಸಿಲ್ಲ, ದೇಶದ ಪ್ರಮುಖ ಸರಕಾರಿ ಸೌಮ್ಯದ ಉದ್ದಿಮೆ ಖಾಸಗೀಕರಣ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಎಸ್. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಬೋರ್’ವೆಲ್ಗೆ ಉಚಿತ ವಿದ್ಯುತ್ ನೀಡಿದರು, ಆಶ್ರಯ, ಆರಾಧನ ಸೇರಿ ಹಲವು ಕಾರ್ಯಕ್ರಮ ನೀಡಲಾಗಿದೆ. ಸಿದ್ಧರಾಮಯ್ಯ ಸರಕಾರ ಸಾಲಮನ್ನಾ, ಕ್ಷೀರಭಾಗ್ಯ, ಅನ್ನಭಾಗ್ಯ, ಬಡವರ ಮನೆಸಾಲ ಮನ್ನಾ ಹೀಗೆ ಹತ್ತು ಹಲವು ಯೋಜನೆ, ಕುಮಾರಸ್ವಾಮಿ ಇದೀಗ ಸಹಕಾರಿ ಸಂಘ ಮಾತ್ರವಲ್ಲಿ ರಾಷ್ಟ್ರೀಕೃತ ಬ್ಯಾಂಕ್ನ ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ಋಣ ತೀರಿಸುವ ಕೆಲಸ ಮಾಡಿದ್ದಾರೆ. ತಾಲೂಕಿನ ಅಂಜನಾಪುರ ಜಲಾಶಯಕ್ಕೆ ತುಂಗಾ ನೀರು ನೀಡುವ ಯೋಜನೆಗೆ 200 ಕೋಟಿ ರೂ. ಉಡುಗಣಿ, ತಾಳಗುಂದ, ಹೊಸೂರು ಹೋಬಳಿ ಕೆರೆಗೆ ನೀರು ತುಂಬಿಸುವ ಯೋಜನೆಗೆ 200ಕೋಟಿ ರೂ. ನೀಡುವ ಮೂಲಕ ತಾಲೂಕಿನ ರೈತರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಈ ಎಲ್ಲ ಕಾರಣಕ್ಕೆ ಜನತೆ ಈ ಬಾರಿ ಜೆಡಿಎಸ್ಗೆ ಮತ ನೀಡುವ ಮೂಲಕ ಕೆಲಸ ಮಾಡಿದವರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಜೆಡಿಎಸ್ ಮುಖಂಡ ಎಚ್.ಟಿ. ಬಳಿಗಾರ್, ಮುಖಂಡರುಗಳಾದ ನಗರದ ಮಹಾದೇವಪ್ಪ, ಭಂಡಾರಿ ಮಾಲತೇಶ್, ಮಾರವಳ್ಳಿ ಉಮೇಶ್, ದರ್ಶನ್ ಉಳ್ಳಿ, ಸುಧೀರ್ ಮತ್ತಿತರರು ಇದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post