ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಪರಂಪರೆ, ಸಂಸ್ಕೃತಿಯ ನಿರಂತರ ಪಾಲನೆ ಅಗತ್ಯವಾಗಿದೆ. ಕುಲಗಳು ಒಂದಾದಾಗ ಬಲ ಹೆಚ್ಚಾಗುತ್ತದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಸುತ್ತದೆ. ಎಲ್ಲರೂ ಅವರವರ ಕುಲ ಧರ್ಮಗಳನ್ನು ಆಚರಿಸುವ ಮೂಲಕ ಹಿಂದೂ ಧರ್ಮವನ್ನು ಬಲಗೊಳಿಸಬೇಕು ಎಂದು ಶ್ರೀ ಕಾಂಚೀ ಕಾಮಕೋಟಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶಂಕರ ವಿಜೇಯೇಂದ್ರ ಸರಸ್ವತೀ ಮಹಾಸ್ವಾಮಿಗಳವರು Shankara Saraswathi Shri of Kanchi Kamakoti Mutt ಹೇಳಿದರು.
ಪುತ್ತೂರು ಸಮೀಪದ ಮಾಣಿ-ಪೆರಾಜೆಯ ಶ್ರೀರಾಮಚಂದ್ರಾಪುರ ಮಠದ ಶಾಖೆಗೆ ಭೇಟಿ ನೀಡಿದ ಅವರು, ಶ್ರೀಮಠದ ದೇವತಾ ಸಾನ್ನಿಧ್ಯವನ್ನು ದರ್ಶಿಸಿ, ನೂತನ ಪುಷ್ಪ ರಥಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು Raghaveshwara Shri of Ramachandrapura Mutt ಮಾತನಾಡಿ, ಪ್ರತಿ ಮನೆಯಲ್ಲಿ ಆರೋಗ್ಯ – ನೆಮ್ಮದಿ ಇರಬೇಕು. ಆಹಾರ ಶುದ್ಧತೆಯಿಂದ ಜೀವನ ಶುದ್ಧವಾಗುತ್ತದೆ. ‘ತೋಟದಲ್ಲಿ ಅಡಿಕೆ, ಮನೆಯಲ್ಲಿ ಅಡಿಗೆ ಎರಡು ಮುಖ್ಯ’ ಎಂದು ಕಾಂಚೀ ಗುರುಗಳು ನೀಡಿರುವ ಸಂದೇಶವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಧರ್ಮ-ಸಂಸ್ಕೃತಿಗಳನ್ನು ರಕ್ಷಿಸುವುದು ಶಿಷ್ಯರೆಲ್ಲರ ಹೊಣೆಯಾಗಿದ್ದು, ಪರಂಪರೆಯನ್ನು ಉಳಿಸುವ ಜತೆಗೆ ಸಮಾಜ ಸಂರಕ್ಷಣೆಯಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದಿಂದ ಕಾಂಚಿ ಸ್ವಾಮಿಗಳಿಗೆ ಸಾಲಿಗ್ರಾಮ ಸಹಿತ ಸ್ವರ್ಣ ಖಚಿತ ರುದ್ರಾಕ್ಷಿಯ ಹಾರ ಸಮರ್ಪಣೆ ಮಾಡಲಾಯಿತು. ಕಾಂಚೀ ಮಠದಿಂದ ರಾಘವೇಶ್ವರ ಶ್ರೀಗಳಿಗೆ ಉಪಾಯನದ ಸಮರ್ಪಣೆ ನಡೆಯಿತು. ಪೆರಾಜೆ ಮಠದ ಶ್ರೀದೇವರ ನೂತನ ಪುಷ್ಪ ರಥೋತ್ಸವಕ್ಕೆ ಕಂಚಿ ಶ್ರೀಗಳು ಚಾಲನೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
