ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ತಾಳ್ಮೆ, ಸಹನೆ ತುಂಬಾ ಮಹತ್ವವಾಗಿದ್ದು, ಪರಿಶ್ರಮ ಪಟ್ಟು ಅಭ್ಯಾಸ ಮಾಡಬೇಕು. ಪಡೆಯುವ ಅಂಕದ ಕುರಿತು ಅತಿಯಾದ ಚಿಂತನೆ ಅವಶ್ಯಕತೆ ಇರುವುದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಬಿ. ಶಿವಕುಮಾರ್ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ ಮತ್ತು ಹತ್ತನೇ ಯ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರಮದೊಟ್ಟಿಗೆ ಯಶಸ್ಸು ಒಂದೇ ಬರುತ್ತದೆ. ವಿದ್ಯಾರ್ಥಿಗಳು ತಮ್ಮ ಕಾಲ ಮೇಲೆ ತಾವು ನಿಂತಾಗ ತಾವು ಕಲಿತ ಶಾಲೆ ಹಾಗೂ ಸಮಾಜಕ್ಕೆ ತಮ್ಮಿಂದಾದ ಋಣವನ್ನು ತೀರಿಸಬೇಕೆಂದು ಹೇಳಿದರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ. ರವೀಂದ್ರ ಮಾತನಾಡಿ, ವಿದ್ಯಾರ್ಥಿಗಳ ನಿರ್ದಿಷ್ಟವಾದ ಗುರಿ ಹೊಂದಿ ಅದರ ಸಾಧನೆಗೆ ನಿರಂತರವಾಗಿ ಪರಿಶ್ರಮ ವಹಿಸಿದರೆ ಉನ್ನತ ಸ್ಧಾನ ಪಡೆಯಬಹುದು. ಪಾಲಕರು ಹಲವಾರು ಕಷ್ಟದ ನಡುವೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಮತ್ತು ಶಿಕ್ಷಕರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕು. ಹೆತ್ತ ಪೋಷಕರಿಗೂ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸೀಮಿತವಾಗದೇ ಉತ್ತಮವಾದ ನಡವಳಿಕೆ ಹಾಗೂ ಅಭ್ಯಾಸಗಳನ್ನ ಬೆಳೆಸಿಕೊಂಡು ಸುಸಂಸ್ಕೃತರಾಗಿ ರೂಪುಗೊಳ್ಳಬೇಕು. ಪ್ರತಿ ವಿದ್ಯಾರ್ಥಿಗೂ ಎಸ್’ಎಸ್’ಎಲ್’ಸಿ ಹಂತ ಬಹುಮುಖ್ಯವಾಗಿದೆ ಎಂದರು.
ಪರೀಕ್ಷಾ ಸಮಯ ಸಮೀಪಿಸುತ್ತಿರುವುದರಿಂದ ಪೌಷ್ಟಿಕ ಆಹಾರ ಸೇವಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು. ಈ ಮೂಲಕ ಶಿಕ್ಷಕರ ಮಾರ್ಗದರ್ಶನದಲ್ಲಿ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದರ ಮೂಲಕ ಪಾಲಕರು, ಗುರುಗಳು ಹಾಗೂ ಸಂಸ್ಧೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಬದುಕು ಸುಂದರವಾಗುತ್ತದೆ. ವೌಲ್ಯಗಳನ್ನು ಕಲಿಯಲು ಮಹಾತ್ಮರ ಜೀವನ ಚರಿತ್ರೆಗಳನ್ನು ಓದುವದನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕನಸನ್ನು ಕಂಡು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಹಿರಿಯ ಶಿಕ್ಷಕಿ ರೇಷ್ಮಾ ಬಾನು ರವರು ಪ್ರಾಸ್ತಾವಿಕ ನುಡಿಗಳನ್ನಾಡಿ, ವಿದ್ಯಾರ್ಥಿಗಳ ಜೀವನ ಉಜ್ವಲವಾಗಿ ದೀಪದ ಹಾಗೆ ಬೆಳಗಲಿ ಮತ್ತು ನಂದಾ ದೀಪದ ಹಾಗೆ ಅವರು ಜೀವನ ಬೆಳಗಲಿ ಎಂದು ಪ್ರಾರ್ಥಿಸಿ ದೀಪಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹತ್ತನೇಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡು, ನಾವು ಉತ್ತಮ ಅಭ್ಯಾಸದೊಂದಿಗೆ ಉತ್ತಮ ಫಲಿತಾಂಶ ಪಡೆದು ಶಾಲೆಗೂ ಮತ್ತು ಪೋಷಕರಿಗೂ ಒಳ್ಳೆಯ ಹೆಸರು ತರುತ್ತೇವೆ ಎಂದು ಆಶ್ವಾಸನೆ ನೀಡಿದರು.
ಶಿಕ್ಷಕರಾದ ಹಾಲಸ್ವಾಮಿ, ಎಂ.ಕೆ. ಚಂದನ್, ಚಂದ್ರಶೇಖರ್, ಮಂಜುಳಾ ಪಾಟೀಲ್, ಲಲಿತಾ, ರೇಖಾ, ಚಂದ್ರಮತಿ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಎಂ.ಎಸ್. ಚೇತನಾ ಮತ್ತು ತಂಡದವರು ಪ್ರಾರ್ಥಿಸಿ, ವಿ. ಪ್ರಣತಿ ಸ್ವಾಗತಿಸಿದರು. ಕೆ.ಆರ್. ವರ್ಷಿಣಿ ವಂದಿಸಿ, ಯು.ಪಿ. ಹೇಮಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















