ತೀರ್ಥಹಳ್ಳಿ: ಮಲೆನಾಡಿನ ಅನೇಕ ಹಳ್ಳಿಗಳು ಇಂದಿಗೂ ಸೌಲಭ್ಯ ವಂಚಿತವಾಗಿದ್ದರೂ ಇನ್ನು ಆಡಳಿತ ಈ ಬಗ್ಗೆ ಗಮನಿಸಿಲ್ಲ ಎಂಬುದಕ್ಕೆ ಇದೀಗ ಕುಸಿಯುವ ಭೀತಿಯಲ್ಲಿರುವ ಶೇಡ್ಗಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ತುಂಬ್ರಮನೆ ಸೇತುವೆ ಸ್ಪಷ್ಟ ನಿದರ್ಶನ.
ಹೌದು. ಶೇಡ್ಗಾರು ಮತ್ತು ಸಾಲ್ಗಡಿ ಗ್ರಾಮ ಪಂಚಾಯತ್ ಗಡಿಯಲ್ಲಿದೆ. ಈ ಸೇತುವೆ ತೀರ್ಥಹಳ್ಳಿ ಮತ್ತು ಕೊಪ್ಪ ಗಡಿ ಭಾಗದ ನೂರಾರು ಹಳ್ಳಿಗಳಿಗೆ ಸಂಪರ್ಕ ಬೆಸೆಯುತ್ತದೆ. ಆದರೆ ಈವರೆಗೆ ಸೇತುವೆ ಶಿಥಿಲವಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಿಸಿಲ್ಲ ಎಂದು ಈ ಭಾಗದ ಯುವ ನಾಯಕ ಕಟ್ಟೆಹಕ್ಲು ಫಣಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇತುವೆ ಕುಸಿದಿದ್ದು ಈ ಸೇತುವೆ ಮೇಲೆಯೇ ಶಾಲಾ ಮಕ್ಕಳು ಶಾಲೆಗೆ ಹೋಗಬೇಕು. ಜತೆಗೆ ಈ ಭಾಗದ ಅನೇಕ ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಇಲ್ಲ. ಹೀಗಾಗಿ ಈ ಸೇತುವೆ ಬಳಸಿ ವಾಹನಗಳಲ್ಲಿ ಪ್ರಯಾಣಿಸಬೇಕಿದೆ. ಆದ್ದರಿಂದ ತಕ್ಷಣ ಶಾಸಕರು ಈ ಬಗ್ಗೆ ಗಮನಿಸಬೇಕು ಎಂದು ಗ್ರಾಮಪಂಚಾಯತ್ ಸದಸ್ಯ ಪ್ರಶಾಂತ್ ಕುಪ್ಪಳ್ಳಿ ಮನವಿ ಮಾಡಿದ್ದಾರೆ.
ತಾಪಂ ಅಧ್ಯಕ್ಷೆ ನವಮಣಿ ರವಿಕುಮಾರ್, ತಾಲೂಕು ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಶಾಸಕರು ವಿಧಾನಸಭಾ ಕಲಾಪದಲ್ಲಿ ಭಾಗಿಯಾಗಿರುವುದರಿಂದ ಬಳಿಕ ಭೇಟಿ ನೀಡಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅನಾಹುತ ಸಂಭವಿಸಿದ ಮೇಲೆ ಬಾಯಿ ಬಡಿದುಕೊಳ್ಳುವ ಬದಲು ತಾಲೂಕಿನೆಲ್ಲೆಡೆ ಇರುವ ಇಂತಹ ಸೇತುವೆ, ಸಂಕ, ರಸ್ತೆ ಮೇಲೆ ಆಡಳಿತ ಗಮನವಹಿಸಬೇಕು. ಆದ್ಯತೆ ಮೇಲೆ ಕಾಮಗಾರಿ ಮುಗಿಸಬೇಕಿದೆ.
Discussion about this post