ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಎದುರಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.
ಅವರು ಸೋಮವಾರ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಹಿರಿಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಲ್ಲಿ 700ರಿಂದ 800ರವರೆಗೆ ಆಕ್ಸಿಜನ್ ಬೆಡ್‌ಗಳು ಕೋವಿಡ್ ರೋಗಿಗಳಿಗಾಗಿ ಲಭ್ಯವಿದೆ. ಪ್ರಸ್ತುತ 250 ಮಂದಿ ಕೋವಿಡ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯತ್ತಿದ್ದು, ಕೋವಿಡೇತರ ರೋಗಿಗಳಿಗೆ ಮೆಗ್ಗಾನ್‌ನಲ್ಲಿ ಒದಗಿಸಲಾಗುತ್ತಿರುವ ಚಿಕಿತ್ಸೆಗೆ ಯಾವುದೇ ತೊಂದರೆಯಾಗದAತೆ ಸೌಲಭ್ಯಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ರೋಗ ಲಕ್ಷಣ ಇಲ್ಲದವರನ್ನು ಹೋಂ ಕ್ವಾರೆಂಟೈನ್‌ಗೆ ಕಳುಹಿಸಲಾಗುತ್ತಿದೆ. ಚಿಕಿತ್ಸೆ ಅಗತ್ಯವಿರುವವರನ್ನು ಮಾತ್ರ ಮೆಗ್ಗಾನ್‌ನಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ನೆರೆಯ ಜಿಲ್ಲೆಗಳಿಂದಲೂ ಕೋವಿಡ್ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿರುವುದರಿಂದ ಮೆಗ್ಗಾನ್ ಮೇಲೆ ಸ್ವಲ್ಪಮಟ್ಟಿನ ಒತ್ತಡ ಬೀಳುತ್ತಿದೆ. ಮೆಗ್ಗಾನ್‌ನಲ್ಲಿ ಆಕ್ಸಿಜನ್ ಪೂರೈಕೆಗೆ ಸಧ್ಯ ಯಾವುದೇ ಕೊರತೆ ಇರುವುದಿಲ್ಲ. ಇಲ್ಲಿ 16ಸಾವಿರ ಲೀಟರ್ ಆಕ್ಸಿಜನ್ ಸಂಗ್ರಹ ಟ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಜಿಂದಾಲ್‌ನಿಂದ ಪ್ರತಿ ಎರಡು ದಿನಗಳಿಗೊಮ್ಮೆ ಅಗತ್ಯ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ದಿನ 2ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ನೆರೆಯ ಜಿಲ್ಲೆಗಳ ಸ್ಯಾಂಪಲ್‌ಗಳನ್ನು ಸಹ ಇಲ್ಲಿಯೇ ಪರೀಕ್ಷೆಗೆ ಕಳುಹಿಸಿದ್ದರಿಂದ ಫಲಿತಾಂಶ ಬರಲು ವಿಳಂಬವಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಇದು ಸುಧಾರಿಸಲಿದೆ. 24ಗಂಟೆಯ ಒಳಗಾಗಿ ಫಲಿತಾಂಶ ಒದಗಿಸಲು ಸೂಚನೆ ನೀಡಲಾಗಿದೆ. ಪ್ರಸ್ತುತ ಮೆಗ್ಗಾನ್‌ನಲ್ಲಿ ಒಂದು ಸಿಟಿ ಸ್ಕ್ಯಾನಿಂಗ್ ಲಭ್ಯವಿದ್ದು, ಅಗತ್ಯ ಬಿದ್ದರೆ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳ ಸಭೆ:
ಇದಕ್ಕೂ ಮೊದಲು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೆಗ್ಗಾನ್‌ನಲ್ಲಿ ಅಗತ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಉತ್ತಮಪಡಿಸಲಾಗಿದೆ. ಮೆಗ್ಗಾನ್‌ನಲ್ಲಿ ಇನ್ನೂ 250 ಆಕ್ಸಿಜನ್ ಬೆಡ್ ಸಿದ್ಧಪಡಿಸಲಾಗುತ್ತಿದೆ. ಮೆಗ್ಗಾನ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ತಾಲೂಕು ಆಸ್ಪತ್ರೆಗಳಲ್ಲಿ ಸಹ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಶಿಕಾರಿಪುರ ತಾಲೂಕು ಆಸ್ಪತ್ರೆಯಲ್ಲಿ ಸ್ಥಳೀಯವಾಗಿ ಆಕ್ಸಿಜನ್ ಉತ್ಪಾದಿಸಲು ಆಕ್ಸಿಜನ್ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಕಾರ್ಯಾರಂಭವಾಗಲಿದೆ. ಭದ್ರಾವತಿ ಹಾಗೂ ಸಾಗರದಲ್ಲೂ ಈ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಟ 50 ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ ಲಭ್ಯವಿದ್ದು, ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಯ ವೈದ್ಯರ ಸೇವೆಯನ್ನು ಸಹ ಪಡೆದುಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಶಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಡಾ. ಶ್ರೀಧರ್, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಡಿಎಚ್‌ಒ ಡಾ.ರಾಜೇಶ ಸುರಗಿಹಳ್ಳಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post