Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಧಕರಾಗ ಬಯಸುವವರಿಗೆ ತಮ್ಮಲ್ಲಿನ ತಾಳ್ಮೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಜಾಣ್ಮೆ ಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಶನಿವಾರ ನಗರದ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ 2022-23 ನೇ ಸಾಲಿನ ವಾರ್ಷಿಕ ಕ್ರೀಡಾ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇರೆಯವರ ಉದಾಹರಣೆಗಳನ್ನು ಕೇಳಿಸಿಕೊಳ್ಳುವುದಕ್ಕಿಂತ ನಾವೇ ಇತರರಿಗೆ ಉದಾಹರಣೆಯಾಗಬೇಕಿದೆ. ಬದುಕಿನಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ. ಜ್ಞಾನದ ಪ್ರೌಢತ್ವಕ್ಕೆ ವಯಸ್ಸಿನ ಮಿತಿಯಿಲ್ಲ. ನಿರಂತರ ಕಲಿಕೆ ಬದುಕಿನ ದೈನಂದಿನ ಪ್ರಕ್ರಿಯೆಯಾಗಲಿ. ನಾವು ಸಂಪಾದಿಸುವ ಹಣ, ವಸ್ತುಗಳಿಗೆ ನಾವೇ ಕಾವಲುಗಾರರು, ಅದರೇ ನಾವು ಸಂಪಾದಿಸಿದ ವಿದ್ಯೆ, ಪುಣ್ಯ ನಮಗೆ ಕಾವಲುಗಾರರು.
ಹಣ ಅಂತಸ್ತು ಅಧಿಕಾರ ಎಂದಿಗೂ ಶಾಶ್ವತವಲ್ಲ. ನಾವು ಪಡೆದ ವಿದ್ಯೆ ಶಾಶ್ವತವಾಗಿದ್ದು, ಹಾಗಾಗಿಯೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಮಕ್ಕಳು ಹೆಚ್ಚು ಪ್ರಾಧಾನ್ಯತೆ ನೀಡಿ. ವಿದ್ಯಾವಂತ ಹಾಗೂ ನಾಗರೀಕ ನಡುವೆ ವ್ಯತ್ಯಾಸವಿದೆ. ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉತ್ತಮ ವಿದ್ಯಾವಂತ ನಾಗರೀಕನಾಗಿ ಹೊರಹೊಮ್ಮಲು ಸಾಧ್ಯ. ನಾವು ಸೇವಿಸುವ ಆಹಾರ ಅಲ್ಪ ತೃಪ್ತಿ ನೀಡಿದರೆ, ವಿದ್ಯೆ ದೀರ್ಘಾವಧಿಯ ತೃಪ್ತಿ ನೀಡುತ್ತದೆ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ವಿದ್ಯಾರ್ಥಿಗಳು ಸೋಲು, ಗೆಲುವಿನ ವಿಮರ್ಶೆ ಮಾಡಿಕೊಳ್ಳಬೇಕಿದೆ. ಕ್ರೀಡೆಯಂತೆ ಜೀವನವೂ ಕೂಡ. ಯಾವುದೇ ಯಶಸ್ವಿ ವ್ಯಕ್ತಿಯ ಯಶಸ್ಸಿನ ಹಿಂದೆ, ದೈಹಿಕ ಮಾನಸಿಕ ಕ್ಷಮತೆ ಪಡೆಯುವ ಪರಿಶ್ರಮವಿರುತ್ತದೆ. ಅಂತಹ ಶ್ರದ್ಧೆಯಾಧಾರಿತ ಪರಿಶ್ರಮಯುತ ಸಾಧನೆ ನಿಮ್ಮದಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಚಿಕ್ಕಪೆಂಚಾಲಯ್ಯ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ||ಶಿವಮೂರ್ತಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಹೆಚ್.ಡಿ.ಅಜಯ್ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕರಾದ ಇಮ್ತಿಯಾಜ್ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಕರಾದ ಹೆಚ್.ದೇವರಾಜ್ ಕ್ರೀಡಾ ವರದಿ ಮಂಡಿಸಿದರು, ಶಿಕ್ಷಕಿ ಸುಜಾತ ನಿರೂಪಿಸಿದರು. ವಿವಿಧ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Discussion about this post