ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಉತ್ತಮ ಹೆಸರು ಗಳಿಸಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆಯ ಮುಡಿಗೆ ಮತ್ತೊಂದು ಗರಿ ಮೂಡಿದ್ದು, ವಯೋವೃದ್ಧರೊಬ್ಬರಿಗೆ ಎಂಡೋಸ್ಕೋಪಿ ವಿಧಾನದ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಆಸ್ಪತ್ರೆಯ ಡಾ.ವಿ. ಶಿವಕುಮಾರ್, ಕ್ಲಿಷ್ಟಕರವಾದ ಪಿತ್ತನಾಳದ ಕಲ್ಲನ್ನು ಎಂಡೋಸ್ಕೋಪಿಯನ್ನು ವಯೋವೃದ್ಧರಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
81 ವರ್ಷದ ವಯೋವೃದ್ಧರೊಬ್ಬರು ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇವರಿಗೆ ಅನೇಕ ರಕ್ತ ಮತ್ತು ರೇಡಿಯಾಲಜಿ ಪರೀಕ್ಷೆಗಳನ್ನು ಮಾಡಿಸಿದರೂ ಸರಿಯಾದ ಕಾರಣವೇನು ಎಂದು ತಿಳಿದು ಬರಲಿಲ್ಲ. ಆನಂತರ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ಗ್ಯಾಸ್ಟ್ರೋಎಂಟರೋಲಜಿಸ್ಟ್ ಡಾ.ವಿ. ಶಿವಕುಮಾರ್ ಅವರನ್ನು ಸಂದರ್ಶಿಸಿದರು.
ಇವರನ್ನು ಕೂಲಂಕಶವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನೋಡಿದಾಗ ವೃದ್ಧರು ಪಿತ್ತನಾಳದ ಕಲ್ಲಿನ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದುಬಂದಿದೆ. ಕಲ್ಲಿನ ಗಾತ್ರ ಸುಮಾರು 2.5 ಸೆಂಟಿ ಮೀಟರ್’ನಷ್ಟು ದೊಡ್ಡದಾಗಿತ್ತು.
ಸಾಮಾನ್ಯವಾಗಿ ಈ ರೀತಿಯ ಪ್ರಕರಣಗಳಲ್ಲಿ ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಕಲ್ಲು ತೆಗೆಯಲಾಗುತ್ತದೆ. ಆದರೆ, ಇವರಿಗೆ ಮಧುಮೇಹ ಹಾಗೂ ಹೃದಯದ ಕಾಯಿಲೆ ಇರುವುದರಿಂದ ಶಸ್ತ್ರಚಿಕಿತ್ಸೆ ಮಾಡುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.
ಹೀಗಾಗಿ, ಉದರ ದರ್ಶಕ ವಿಧಾನದ ಮೂಲಕ ಕಲ್ಲನ್ನು ತೆಗೆಯಲು ಪ್ರಯತ್ನ ಮಾಡಲಾಯಿತು. ಈ ಹಂತದಲ್ಲಿ ಪಿತ್ತನಾಳವು ಸಣ್ಣದಾಗಿರುವ ಕಾರಣ ಪಿತ್ತನಾಳದ ಗಾತ್ರವನ್ನು ಹಿಗ್ಗಿಸಿ ಲಿಥೋಟ್ರೆಪ್ಸಿ ಮೂಲಕ ಕಲ್ಲನ್ನು ಪುಡಿಪುಡಿ ಮಾಡಿ, ಹೊರತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಅಂದರೆ, ದೊಡ್ಡ ಕಲ್ಲನ್ನು, ಸಣ್ಣ ಸಣ್ಣ ಪುಡಿಗಳನ್ನಾಗಿ ಮಾಡಿ ಹೊರತೆಗೆಯಲಾಗಿದೆ.
ಸಂತೋಷದ ಸಂಗತಿ ಎಂದರೆ, ಪಿತ್ತನಾಳದ ಕಲ್ಲನ್ನು ಹೊರತೆಗೆದ ನಂತರ ವೃದ್ಧರು ಹೊಟ್ಟೆನೋವು ಹಾಗೂ ಕಾಮಾಲೆ ರೋಗಗಳಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಈ ಕುರಿತಂತೆ ಮಾತನಾಡಿದ ಡಾ.ಶಿವಕುಮಾರ್ ಅವರು, ಈ ಆಧುನಿಕ ವಿಧಾನದ ಮೂಲಕ ಎಲ್ಲ ವಯೋಮಾನದವರಲ್ಲೂ ಅಂದರೆ ಸಣ್ಣ ಮಕ್ಕಳಿಂದ ವಯೋವೃದ್ಧರವರೆಗೂ ಎಲ್ಲರಿಗೂ ಎಂಡೋಸ್ಕೋಪಿ ಮೂಲಕ ಅತಿ ಕಡಿಮೆ ಅಡ್ಡಪರಿಣಾಮದಿಂದ ಗುಣಪಡಿಸಲು ಸಾಧ್ಯವಿದೆ. ಇಂತಹ ಸಮಸ್ಯೆ ಹೊಂದಿರುವ ಯಾರೂ ಭಯ ಪಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.
ಡಾ.ಶಿವಕುಮಾರ್ ಅವರು ಭದ್ರಾವತಿಯ ಆಕಾಶವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಪಾರ ಜನಪ್ರಿಯತೆ ಗಳಿಸಿದ್ದಾರೆ.
ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಡಾ.ಶಿವಕುಮಾರ್ ಅವರ ಜೊತೆಯಲ್ಲಿ ಡಾ. ಸುಮೇರ್ಶ ನಾಯರ್ ಸೇರಿದಂತೆ ಹಲವು ವೈದ್ಯರ ತಂಡ ಸಹಕಾರ ನೀಡಿತ್ತು. ಈ ಎಲ್ಲರನ್ನೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಎಸ್. ದೇಸಾಯಿ ಅಭಿನಂದಿಸಿದ್ದಾರೆ.
(ವರದಿ: ಡಾ.ಸುಧೀಂದ್ರ)
Discussion about this post