ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಟ ರಾಜನಂದ್ ಅವರ ಅಭಿನಯ ಜನಮಾನಸದಲ್ಲಿ ಸದಾ ಹಸಿರಾಗಿದ್ದು, ಅವರ ಮನೋಜ್ಞ ಅಭಿನಯ, ಸಂಭಾಷಣೆ, ಪಾತ್ರಕ್ಕೆ ತಕ್ಕಂತೆ ಭಾವನೆ ಇಂದಿಗೂ ಮರೆಯುವಂತಿಲ್ಲ ಎಂದು ಡಾ. ರಾಜ್‌ಕುಮಾರ್ ಭಾಮೈದ, ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್ ಹೇಳಿದರು.
ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಲಕ್ಷ್ಮೀ ಕಲಾವೃಂದ ಮೈಸೂರು ಅವರು ಹಿರಿಯ ಚಲನಚಿತ್ರ ನಟ “ರಾಜಾನಂದ್ ನೆನಪಿನಾರ್ಥ” ಆಯೋಜಿಸಿದ್ದ ಚಿನ್ನದ ಗೊಂಬೆ ಎಂಬ ಹಾಸ್ಯಭರಿತ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಂಗಭೂಮಿ ಕಲಾವಿದರು ಪಾತ್ರಗಳಲ್ಲಿ ತಲ್ಲೀನರಾಗಿ ಮನಮುಟ್ಟುವಂತೆ ಅಭಿನಯಿಸುತ್ತಿದ್ದರು. ಸಾಕಷ್ಟು ಪ್ರಸಿದ್ಧ ರಂಗಭೂಮಿ ಕಲಾವಿದರು ಇಂದಿಗೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ. ವಿಜಯ್‌ಕುಮಾರ್ ಮಾತನಾಡಿ, ರಂಗಭೂಮಿ ಕಲಾವಿದರಿಗೆ ಸರ್ಕಾರ ಸಕಾಲದಲ್ಲಿ ಒಳ್ಳೆಯ ಪ್ರೋತ್ಸಾಹ ನೀಡಬೇಕು. ಇಂದು ಸಾಮಾಜಿಕ ಜಾಲತಾಣಗಳ ಅಬ್ಬರದಿಂದ ನಾಟಕಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
Also read: ಭದ್ರಾವತಿ: ನಿವೃತ್ತ ದೈಹಿಕ ಶಿಕ್ಷಕ ಶ್ಯಾಮಣ್ಣ ವಿಧಿವಶ
ರಂಗಭೂಮಿ ವೇದಿಕೆ ಮೇಲೆ ನೋಡುವ ನಟನೆಗೂ ಪರದೆ ಮೇಲೆ ನೋಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಾಟಕಗಳು ನಮ್ಮ ಬದುಕನ್ನು ಬದಲಿಸುವುದರ ಜತೆಗೆ ಸಂತೋಷ ಉಂಟು ಮಾಡಿ ಮನಸ್ಸಿನ ದುಗುಡ ದುಮ್ಮಾನಗಳನ್ನು ಕಡಿಮೆ ಮಾಡುತ್ತವೆ. ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ತಿಳಿಸಿದರು.
ಕಲಾವಿದ ಗಿರೀಶ್ ಮಾತನಾಡಿದರು. ಹಿರಿಯ ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ ಬಿ. ಲೀಲಾವತಿ ಅವರ ಸಾರಥ್ಯದಲ್ಲಿ ಹಾಸ್ಯನಾಟಕ ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಪ್ರದರ್ಶನ ನೀಡಿ ಅಪಾರ ಜನಮೆಚ್ಚುಗೆ ಗಳಿಸಿದೆ.
ವೇದಿಕೆಯಲ್ಲಿ ಕೆಇಬಿ ಕೆಂಚರಾಜ್, ಹಿರಿಯ ಕಲಾವಿದರಾದ ಮಧು ಪ್ರಕಾಶ್, ಹು.ರಾ. ಶೇಷಾಚಲ, ಗೋಪಿನಾಥ್, ಪ್ರಕಾಶ್, ಜಗ್ಗೇಶ್, ಬಿ.ಕುಮಾರಸ್ವಾಮಿ, ನಾಗೇಂದ್ರ ಉಪಸ್ಥಿತರಿದ್ದರು. ಹಾಸ್ಯದ ನಾಟಕ ಚಿನ್ನದ ಗೊಂಬೆ ಪ್ರದರ್ಶನ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post