ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ನೀಡುತ್ತಿರುವ ರಾಜ್ಯ ಸರ್ಕಾರ ಇದಕ್ಕೆ ಕನಿಷ್ಠ ವಯೋಮಿತಿ 35 ವರ್ಷ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಯುವ ರಂಗಕರ್ಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆಲ್ಲಾ ಕ್ಷೇತ್ರದ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುತ್ತಿರುವಂತೆಯೇ ಕಲಾವಿದರಿಗೂ ಸಹ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆದರೆ, ಇದರ ಕನಿಷ್ಟ ವಯೋಮಿತಿಯನ್ನು 35 ವರ್ಷಕ್ಕೆ ನಿಗಧಿಪಡಿಸಿರುವುದು ಯುವ ಕಲಾವಿದರಿಗೆ ಮಾಡಿರುವ ಅನ್ಯಾಯ ಎಂದು ಯುವ ರಂಗಕರ್ಮಿಗಳು ಕಿಡಿಕಾರಿದ್ದಾರೆ.ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವಿ ಮಾಡುವ ಹಾಗೂ ಒತ್ತಡ ಹೇರುವ ಉದ್ದೇಶದಿಂದ ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗದ ಹಿರಿಯ ರಂಗಕರ್ಮಿಗಳ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಅದು ಹೀಗಿದೆ.
ಯಾರು ಏನೆಂದರು?
ಈ ಕುರಿತಂತೆ ಮಾತನಾಡಿರುವ ಹಿರಿಯ ರಂಗಕರ್ಮಿ ಮಹಾದೇವ ಹಡಪದ ಅವರು, ಆರ್ಥಿಕ ಸಹಾಯಕ್ಕೆ ವಯಸ್ಸಿನ ನಿರ್ಬಂಧ ಸರಿಯಲ್ಲ ರಂಗಮೂಮಿ ಆಕರ್ಷಣೀಯವಾಗಿರುವುದು ಯುವಕರಿಂದ ಯಾವುದೇ ಕ್ರಿಯಾಶೀಲ ಕೆಲಸಕ್ಕೆ ಯುವಕರೇ ಬೇಕು ಯುವಕರನ್ನು ಕಡೆಗಣಿಸಿ ಪ್ಯಾಕೇಜ್ ಘೋಷಿಸಿರುವುದ ಅಕ್ಷಮ್ಯ. ಈ ವಿಚಾರದಲ್ಲಿ ನಿಯಮ ಸಡಿಲಿಕೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಹೆಚ್. ಜನಾರ್ಧನ ಅವರು, ಮುಂದಿನ ಮುನ್ನುಡಿಗಳಾದ ಯುವಕ ಕಲಾವಿದರನ್ನು ಕಳೆದುಕೊಂಡರೆ ನಮ್ಮ ಕಲೆ ಮತ್ತು ಸಂಸ್ಕೃತಿ ಸರ್ವನಾಶ. ಇದು ನಮ್ಮ ನಾಡಿಗೆ ಶೋಭೆಯಲ್ಲ. ಈ ವಿಚಾರ ಮರುವಿಮರ್ಶೆ ಆಗಲೇಬೇಕು ಎಂದಿದ್ದಾರೆ.
ಸರ್ಕಾರ ಯಾವ ಲೆಕ್ಕಾಚಾರದಲ್ಲಿ 35 ವರ್ಷ ನಿಗದಿ ಮಾಡಿದೆ ಎಂಬುದೇ ಅರ್ಥವಾಗುತ್ತಿಲ್ಲ. ಈಗ ಅತಿ ಹೆಚ್ಚು ಕಲಾವಿದರು ಸಂಕಷ್ಟದಲ್ಲಿರುವುದು 35 ವರ್ಷದ ಒಳಗಿನವರೇ. ಯುವ ರಂಗಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕಿತ್ತು. ಬಹುತೇಕ 25 ವರ್ಷದ ವೇಳೆಗೆ ಯುವ ಕಲಾವಿದರು ಪೂರ್ಣಪ್ರಮಾಣದಲ್ಲಿ ಸಕ್ರಿಯರಾಗಿರುತ್ತಾರೆ. ಹೀಗಾಗಿ, ಈಗ ನಿಗದಿ ಮಾಡಿರುವ ವಯೋಮಿತಿಯಲ್ಲಿ 10 ವರ್ಷ ಇಳಿಕೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.
-ಆರ್.ಎಸ್. ಹಾಲಸ್ವಾಮಿ, ಹಿರಿಯ ರಂಗಕರ್ಮಿ, ಟಿವಿ ಭಾರತ್ ಪ್ರಧಾನ ಸಂಪಾದಕರು
ಲಾಕ್ ಡೌನ್ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರ ಆರ್ಥಿಕ ನೆರವನ್ನು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಮೂವತ್ತೈದು ವರ್ಷ ಮೇಲ್ಪಟ್ಚ ಕಲಾವಿದರು ಮಾತ್ರವೇ ಅದಕ್ಕೆ ಅರ್ಹರು ಎನ್ನುವ ಸರ್ಕಾರದ ನಿರ್ಧಾರ ಖಂಡಿತಾ ಸರಿಯಲ್ಲ. ನಾಟಕ, ನೃತ್ಯ, ಸಂಗೀತ ಮತ್ತು ಇತರ ಕಲಾಪ್ರಕಾರಗಳಲ್ಲಿ ಸಾಕಷ್ಟು ಯುವ ಕಲಾವಿದರೂ ತೊಡಗಿಸಿಕೊಂಡಿದ್ದಾರೆ. ಕಲಾವಿದರ ಬದುಕು ಎಂದಿಗೂ ಸುಗಮವಲ್ಲ. ಅವರನ್ನು ಗುರುತಿಸಿ, ಅವರ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗುವುದು ಕೆಲವು ಸಂದರ್ಭಗಳಲ್ಲಿ ಮಾತ್ರ. ಅಂತಹದ್ದರಲ್ಲಿ ಲಾಕ್ ಡೌನ್ ನಿಂದಾಗಿ ಯಾವ ಕಾರ್ಯಕ್ರಮಗಳೂ ನಡೆಯದೆ ಅವರು ತೀವ್ರ ಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರವು ನೆರವು ನೀಡುವ ಪ್ರಕ್ರಿಯೆಯಲ್ಲಿ ವಯಸ್ಸಿನ ಭೇದ ಮಾಡುತ್ತಿರುವುದು ಸರಿಯೆನಿಸದು. ಎಲ್ಲ ವಯಸ್ಸಿನ ಕಲಾವಿದರಿಗೂ ಸರ್ಕಾರದ ಆರ್ಥಿಕ ನೆರವು ಸಿಗಬೇಕು.
ಡಾ. ವಿನಯಾ ಶ್ರೀನಿವಾಸ್
-ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಟ್ರಸ್ಟಿ, ಕಲಾವಿದರು
ಸರ್ಕಾರದ ಈ ನಿರ್ಧಾರ ತಿಳಿದು ಬಹಳ ಬೇಸರವಾಯಿತು. 35 ವರ್ಷ ಕನಿಷ್ಠ ವಯೋಮಿತಿ ನಿಗದಿ ಮಾಡಿರುವುದು ನಿಜಕ್ಕೂ ತಪ್ಪಾದ ನಿರ್ಧಾರ. ಬಹಳಷ್ಟು ಯುವ ಕಲಾವಿದರು ಪೂರ್ಣ ಪ್ರಮಾಣದಲ್ಲಿ ರಂಗಭೂಮಿ ಹಾಗೂ ಕಲೆಯನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಇಂದು ನಿಜವಾಗಿಯೂ ಸಂಕಷ್ಟದಲ್ಲಿರುವವರು 35 ವರ್ಷದ ಕೆಳಗಿನ ಕಲಾವಿದರೇ. ಹೀಗಾಗಿ, ಸರ್ಕಾರ ಈ ನಿರ್ಧಾರವನ್ನು ಪರಿಷ್ಕರಣೆ ಮಾಡಿ ಯುವ ಕಲಾವಿದರನ್ನೂ ಸಹ ಪರಿಗಣಿಸಬೇಕು. ಇದೇ ವೇಳೆ ಸಕ್ರಿಯವಾಗಿರುವ ಯುವ ಕಲಾವಿದರನ್ನು ಗುರುತಿಸಿ ಆದ್ಯತೆಯ ಮೇರೆಗೆ ಸಹಾಯ ನೀಡಬೇಕು.
-ಕಾಂತೇಶ್ ಕದರಮಂಡಲಗಿ, ಹಿರಿಯ ರಂಗಕರ್ಮಿಗಳು
ವೃತ್ತಿ ಆಧಾರಿತವಾಗಿ ಕಲಿತಿರುವವರು ಬಹಳಷ್ಟು ಮಂದಿ 18-20 ವರ್ಷದ ವೇಳೆಗೆ ಪೂರ್ಣ ಪ್ರಮಾಣದ ಕಲಾವಿದರಾಗಿ ಹೊರಹೊಮ್ಮಿರುತ್ತಾರೆ. ಇದರಲ್ಲಿ ಬಹುತೇಕ ಮಂದಿ 10-15 ವರ್ಷಗಳ ಕಾಲ ನಿರಂತರವಾಗಿ ಕಲಾ ಸೇವೆ ಮಾಡುತ್ತಿದ್ದಾರೆ. ರಂಗಭೂಮಿ ಉಳಿಯಬೇಕು ಎಂದರೆ ಯುವ ಕಲಾವಿದರೆಗೇ ಮೊದಲ ಆದ್ಯತೆ ದೊರೆಯಬೇಕು. ಸರ್ಕಾರ ನೀಡುತ್ತಿರುವ ಸಹಾಯಧನ ಅತ್ಯಂತ ಕಡಿಮೆಯೇ ಆದರೂ, ಇದರಲ್ಲೂ ಸಹ ಯುವಕರನ್ನು ಪರಿಗಣಿಸಬೇಕಿತ್ತು. ರಂಗಭೂಮಿ ಉಳಿಯಬೇಕು ಎಂಬ ಆಸೆ ಸರ್ಕಾರಕ್ಕೆ ಇದ್ದರೆ, ಯುವ ಕಲಾವಿದರನ್ನು ಗುರುತಿಸಲೇಬೇಕು. ಹೀಗಾಗಿ, ಆರ್ಥಿಕ ಸಹಾಯಕ್ಕೆ ನಿಗದಿ ಮಾಡಿರುವ ವಯೋಮಿತಿಯನ್ನು ಸರ್ಕಾರ ಇಳಿಕೆ ಮಾಡಲೇಬೇಕು.
-ಹೊನ್ನಾಳಿ ಚಂದ್ರಶೇಖರ್, ಹಿರಿಯ ರಂಗಕರ್ಮಿಗಳು
ರಂಗಭೂಮಿಯನ್ನು ಜೀವನ ಹಾಗೂ ವೃತ್ತಿ ಎಂದು ಪರಿಗಣಿಸಿ ಯಾವುದೇ ರೀತಿಯ ದೊಡ್ಡ ಮಟ್ಟದ ಆದಾಯ ಇಲ್ಲದೇ ಇದ್ದರೂ ಕಲಾಸೇವೆ ಮಾಡುತ್ತಿರುವ ಸಾವಿರಾರು ಯುವ ರಂಗಕರ್ಮಿಗಳಿದ್ದಾರೆ. ಲಾಕ್‌ಡೌನ್‌ನಿಂದ ನಮ್ಮ ಜೀವನವೂ ಸಂಕಷ್ಟದಲ್ಲಿದೆ ಹೀಗಿರುವಾಗ ಯುವ ಕಲಾವಿದರನ್ನು ರಾಜ್ಯ ಸರ್ಕಾರ ಕಡೆಗಣಿಸಿರುವುದು ಅಕ್ಷಮ್ಯವಾದುದು. ಕೂಡಲೇ ಈ ಆದೇಶವನ್ನು ತಿದ್ದುಪಡಿ ಮಾಡಿ ಯುವ ಕಲಾವಿದರನ್ನು ಪರಿಗಣಿಸಬೇಕು.
-ಶ್ರೀಹರ್ಷ ಗೋ ಭಟ್, ಯುವ ರಂಗಕರ್ಮಿ
ಇದೊಂದು ಅನ್ಯಾಯದ ನಿರ್ಧಾರ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಈ ಧನಸಹಾಯಕ್ಕೆ ಪರಿಗಣಿಸದೇ ರಂಗೋದ್ಯೋಗಿಗಳನ್ನು ಅವಮಾನಿಸುತ್ತಾ ಇದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸಹಾಯಧನ ನೀಡಿದ್ದೇವೆ ಎಂಬ ಕಣ್ಣೊರೆಸುವ ತಂತ್ರವಿದು. ಈ ವಯೋಮಾನದವರಿಗೆ ರಂಗವನ್ನೇ ನಂಬಿ ಬದುಕುಕಟ್ಟಿಕೊಂಡವರಿಗೆ, ಕಟ್ಟಿಕೊಳ್ಳುತ್ತಿರುವವರಿಗೆ ದಿಕ್ಕುತೋಚದಂತಾಗಿದೆ. ಆದರೆ, ಸರ್ಕಾರಗಳು ನೆನಪಲ್ಲಿಡಲಿ. 18-35 ವರ್ಷದ ಯುವಸಮೂಹ ಬಹಳ ಮಂದಿ ಇದ್ದಾರೆ. ಅವರು ಮನಸು ಮಾಡಿದರೆ ಬದಲಾವಣೆ ಅಸಾಧ್ಯವಲ್ಲ ಎಂದು.
– ಎ.ಎಸ್. ಅಪರ್ಣಾ, ರಂಗಕರ್ಮಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post