ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೇಂದ್ರ ಸರ್ಕಾರ ಮಂಡಿಸಿರುವ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ ಮಸೂದೆಯು ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ಮತ್ತು ರೈತರ ಆರ್ಥಿಕ ಪರಿಸ್ಥಿತಿ ದ್ವಿಗುಣಗೊಳಿಸಲು ಪೂರಕವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಅವರು ಗುರುವಾರ ಲೋಕಸಭೆಯಲ್ಲಿ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರ್ಕಾರ, ಈ ಸುಗ್ರೀವಾಜ್ಞೆಯ ಮೂಲಕ ಮಾರುಕಟ್ಟೆ ಏಕಸ್ವಾಮ್ಯವನ್ನು ತಡೆಯುವುದರ ಜೊತೆಗೆ, ನಮ್ಮ ರೈತರ ಉತ್ಪನ್ನಗಳಿಗೆ ರಾಷ್ಟ್ರವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಲು ದೃಢ ಹೆಜ್ಜೆ ಇರಿಸಿದೆ. ಇದರಿಂದ ಹೆಚ್ಚು ಹೆಚ್ಚು ಖರೀದಿದಾರರನ್ನು ತಲುಪಲು ಇದರಿಂದ ಸಾಧ್ಯವಾಗುತ್ತದೆ. ಇದರಿಂದಾಗಿ ಮಾರಾಟಗಾರರಲ್ಲಿ ಮತ್ತು ಖರೀದಿದಾರರಲ್ಲಿ ಆರೋಗ್ಯಕರ ಸ್ಪರ್ಧೆಗೆ ಅವಕಾಶ ದೊರೆತು ಮಧ್ಯವರ್ತಿಗಳ ಹಸ್ತಕ್ಷೇಪಕ್ಕೂ ಇಲ್ಲಿ ಅವಕಾಶವಿಲ್ಲದಂತಾಗುತ್ತದೆ. ಖರೀದಿದಾರರೂ ಸಹ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಹೆಚ್ಚು ಹೆಚ್ಚು ರೈತರನ್ನು ಆಕರ್ಷಿಸಬಹುದಾಗಿದೆ ಎಂಬುದಾಗಿ ತಿಳಿಸಿದರು.
ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಲವಾರು ನಿರ್ಬಂಧಗಳಿದ್ದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಗಳಿಗೆ ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಕೊಂಡೊಯ್ಯುವಂತಿಲ್ಲ. ಅಲ್ಲದೇ ಕೋಲ್ಡ್ ಸ್ಟೋರೇಜ್‌ಗಳ ಕೊರತೆ, ಸಾಕಷ್ಟು ಗೋದಾಮುಗಳಿಲ್ಲದೇ ಇರುವುದು, ಮೂಲಸೌಕರ್ಯಗಳಲ್ಲಿರುವ ಕೊರತೆಗಳಿಂದಾಗಿ ತರಕಾರಿ, ಹಣ್ಣುಗಳು ಮತ್ತು ಇತರೆ ಬೇಗನೇ ಹಾಳಾಗುವ ಸರಕುಗಳಲ್ಲಿ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿದೆ ಎಂದರು.
ರೈತ ತಾನು ಬೆಳೆದ ಬೆಳೆಯನ್ನು ದೇಶದಾದ್ಯಂತ ಬೇಡಿಕೆ ಇರುವ ಕಡೆ ತಾನೇ ಮಾರಾಟ ಮಾಡಿ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢವಾಗುವಂತಹ ಈ ಬಿಲ್ ಸನ್ಮಾನ್ಯ ಪ್ರಧಾನಿ ಮೋದಿಜಿ ಅವರ ಹುಟ್ಟುಹಬ್ಬಕ್ಕೆ ನೀಡಿರುವ ಉಡುಗೊರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. @BSYBJP @bcpatilkourava @nstomar @BJP4Karnataka @BSBommai @KarnatakaVarthe pic.twitter.com/Wl8zr65S5O
— B Y Raghavendra (@BYRBJP) September 17, 2020
ಒಬ್ಬ ರೈತ ಸಣ್ಣ ಹಳ್ಳಿಯಲ್ಲಿ ಪಪ್ಪಾಯಿ ಅಥವಾ ಮಾವಿನಂತಹ ಹಣ್ಣನ್ನು ಬೆಳೆಸಿದರೆ, ತನ್ನ ಉತ್ಪನ್ನಗಳನ್ನು ದೇಶದ ಇತರ ಭಾಗಗಳಲ್ಲಿರುವ ಪ್ರೊಸೆಸರ್‌ಗಳಿಗೆ ಮಾರಾಟ ಮಾಡಲು ಆತನಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಆತನು ಅನಿವಾರ್ಯವಾಗಿ ನಿರ್ಬಂಧಿತ ಪ್ರದೇಶದೊಳಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿರುತ್ತದೆ. ಒಂದು ವೇಳೆ ಆತನಿಗೆ ಅಗತ್ಯ ಮೂಲಸೌಕರ್ಯ ದೊರಕಿ, ತನ್ನ ಉತ್ಪನ್ನವನ್ನು ದೇಶದ ಇತರೆ ಭಾಗದಲ್ಲಿರುವ ಪ್ರೊಸೆಸರ್‌ಗೆ ಕೊಂಡೊಯ್ಯುವಂತಿದ್ದರೆ ಆತನಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮದಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಬೀಜಗಳು, ಸೀ ಫುಡ್ಸ್ ಆಹಾರಗಳನ್ನು ಉತ್ಪಾದಿಸುವ ರೈತರು ದೇಶದ ನಾನಾ ಭಾಗಗಳ ಖರೀದಿದಾರರನ್ನು ಆಕರ್ಷಿಸಬಹುದಾಗಿದೆ ಎಂದರು.
ಈ ಮಸೂದೆಯು ಇ-ಮಾರ್ಕೆಟಿಂಗ್ ವ್ಯವಸ್ಥೆಗೆ ಅವಕಾಶವನ್ನು ಕಲ್ಪಿಸಿಕೊಡುವುದರಿಂದಾಗಿ ರೈತರಿಗೆ ಮಾರುಕಟ್ಟೆ ವೆಚ್ಚವೂ ಸಹ ಕಡಿಮೆಯಾಗಲಿದೆ. ದೇಶವಷ್ಟೇ ಅಲ್ಲದೇ ಇಡೀ ಪ್ರಪಂಚದಲ್ಲಿ ಕೊರೋನಾ ಹಿಡಿತದಲ್ಲಿದ್ದರೂ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಕೃಷಿ ಮಾರುಕಟ್ಟೆಗಳನ್ನು ಅನಲಾಕ್ ಮಾಡುವುದು ಸೂಕ್ತವಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
Get In Touch With Us info@kalpa.news Whatsapp: 9481252093
Discussion about this post