ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ, ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಪಸ್ಸು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾಮಗಾರಿ ತನಿಖೆಗಾಗಿ ಒತ್ತಾಯಿಸಿದ್ದಾರೆ. ಮಾಡಲಿ. ಆದರೆ, ರಾಜ್ಯ ಸರ್ಕಾರ ಇದರ ಜೊತೆಜೊತೆಗೆ ಆ.11ರಿಂದ ಹಾರಾಟ ಆರಂಭಿಸಲಿರುವುದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಸರ್ಕಾರಕ್ಕೆ ಮನವಿ ಮಾಡಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್‍ನಲ್ಲಿ ಮಂಜುನಾಥ ಭಂಡಾರಿಯವರು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿದ್ದಾರೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ್ ಕೂಡ ಉತ್ತರ ನೀಡಿದ್ದಾರೆ. ಈ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಆದರೆ ತನಿಖೆಗೂ ಮೊದಲು ವಿಮಾನ ಹಾರಾಟಕ್ಕೆ ಆದ್ಯತೆ ಕೊಡಲಿ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆಗ ಅವರಿಗೆ ಗ್ಯಾರಂಟಿಗಳ ಜಾರಿ ಮಾಡುವ ಬಗ್ಗೆ ಮುಂದಾಲೋಚನೆ ಇರಬೇಕಿತ್ತು. ಈಗ ಯೋಚನೆ ಮಾಡಿದರೆ ಪ್ರಯೋಜನವಿಲ್ಲ. ಅವರ ಎಲ್ಲಾ ಗ್ಯಾರಂಟಿಗಳು ಹುಸಿಯಾಗುತ್ತಿವೆ. ಗ್ಯಾರಂಟಿಗಳ ಗೊಂದಲದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಇನ್ನೂ ಯಾವ ಗ್ಯಾರಂಟಿಗಳು ಕೂಡ ಸ್ಪಷ್ಟವಾಗಿ ಜಾರಿಯಾಗಿಲ್ಲ. ಜನರಿಗೆ ಈ ಸರ್ಕಾರದ ಬಗ್ಗೆ ನಂಬಿಕೆ. ಇಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚುತ್ತದೆ ಎಂದರು.
ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ಮಾಡಲಿ. ಸರ್ಕಾರದ ಬಗ್ಗೆ ಮತ್ತು ಪೊಲೀಸರ ಬಗ್ಗೆ ನನಗೆ ನಂಬಿಕೆ ಇದೆ. ಅದರೂ ಕೂಡ ಮುನಿಗಳ ಹತ್ಯೆಯ ಹಿಂದೆ ಹಲವು ಕೈವಾಡಗಳಿವೆ. ರಾಷ್ಟ್ರದ್ರೋಹಿಗಳು ಈ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಬಂದು ತಿಂಗಳಾಗಿಲ್ಲ. ಗೂಂಡಾಗಿರಿಗಳು, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದ ಅವರು, ರಾಹುಲ್ ಗಾಂಧಿಯವರ ಅನರ್ಹತೆಗೆ ಸಂಬಂಧಿಸಿದಂತೆ ಆದೇಶ ನೀಡಿರುವುದು ಕೋರ್ಟ್. ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದರೆ ಅವರಿಗೆ ನ್ಯಾಯಾಲಯದ ಬಗ್ಗೆ ಗೌರವ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post