ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2023-24ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 10ರೊಳಗಾಗಿ ಸಂಘ ಕೋರಿರುವ ದಾಖಲೆ ಸಮೇತ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಘದ ರಾಜ್ಯ ನಿರ್ದೇಶಕ ಎನ್.ರವಿಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಸಂಘ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿಕೊಂಡು ಬರುತ್ತಿದ್ದು, ಪ್ರತಿವರ್ಷ ರಾಜ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮಾರಂಭ, ಕಾರ್ಯಾಗಾರ, ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸುಮಾರು 7 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜ್ಯ ಸಂಘ ಶಿವಮೊಗ್ಗ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದರು.
ಸದಸ್ಯತ್ವ ನೋಂದಣಿ ಕಾರ್ಯ ಆರಂಭವಾಗಿದ್ದು, ಹೊಸ ಸದಸ್ಯತ್ವ ಪಡೆಯಲು ಕನಿಷ್ಟ 2 ವರ್ಷ ಸೇವೆ ಸಲ್ಲಿಸಿರಬೇಕು. ಆರ್‌ಎನ್‌ಐ ನೋಂದಣಿ ಹೊಂದಿರುವ ದಿನಪತ್ರಿಕೆಗಳು ಕಡ್ಡಾಯವಾಗಿ ಕನಿಷ್ಟ 2 ವರ್ಷ ನಿಯಮಿತವಾಗಿ ಪ್ರಕಟಗೊಂಡಲ್ಲಿ ಮಾತ್ರ ಅಂತಹ ಸಂಸ್ಥೆಗಳ ಪತ್ರಕರ್ತರು ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ. ಯಾವುದೇ ರಾಜಕೀಯ ಪಕ್ಷದ ಸದಸ್ಯರಾದಲ್ಲಿ ಮತ್ತು ಗುತ್ತಿಗೆದಾರರಾಗಿದ್ದಲ್ಲಿ ಸಂಘದ ಸಹ ಸದಸ್ಯತ್ವಕ್ಕೆ ಮಾತ್ರ ಪರಿಗಣಿಸಲಾಗುವುದು ಎಂದರು.
ಸದಸ್ಯತ್ವಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಘಟಕಗಳಿಂದ ಬರುವ ಸದಸ್ಯತ್ವ ಪಟ್ಟಿಯನ್ನು ಜಿಲ್ಲಾ ಘಟಕವು ಕಡ್ಡಾಯವಾಗಿ ಪರಿಶೀಲಿಸಿ ಕಾರ್ಯಕಾರಿ ಸಮಿತಿಯಲ್ಲಿ ಅಂಗೀಕರಿಸಿ ರಾಜ್ಯ ಘಟಕಕ್ಕೆ ಕಳುಹಿಸಿಕೊಡಬೇಕು. ರಾಜ್ಯ ಸಂಘಕ್ಕೆ ಪರ್ಯಾಯವಾಗಿ ಇರುವ ಮತ್ತೊಂದು ಸಂಘದಲ್ಲಿ ಸದಸ್ಯತ್ವ ಹೊಂದಿರುವವರಿಗೆ ಸದಸ್ಯತ್ವ ನೀಡುವುದಿಲ್ಲ ಎಂದರು.
ಸದಸ್ಯತ್ವಕ್ಕೆ 500ರೂ. ಶುಲ್ಕವಿದೆ. ಮಾರ್ಚ್ 10ರೊಳಗಾಗಿ ರಾಜ್ಯ ಸಂಘ ಕೋರಿದ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದಲ್ಲಿ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವ ನೀಡಲಾಗುವುದು. ನಂತರ ಬಂದ ಅರ್ಜಿಗಳಿಗೆ ಸದಸ್ಯತ್ವದ ಬಗ್ಗೆ ರಾಜ್ಯ ಸಂಘವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಹಾಗೂ ಪಟ್ಟಿ ನವೀಕರಿಸುವುದು ಬಿಡುವುದು ರಾಜ್ಯ ಸಂಘದ ನಿಬಂಧನೆಗೆ ಒಳಪಟ್ಟಿರುತ್ತದೆ. ರಾಜ್ಯ ಸಂಘದ ಮಾರ್ಗಸೂಚನೆಯಂತೆ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವ ನೀಡಲಾಗುವುದು ಎಂದರು.
ಹಿರಿಯರು, ವಿಚಾರಶೀಲ, ಸಂವೇದನಾಶೀಲ ಪತ್ರಕರ್ತರಾದ ಡಿ.ಉಮಾಪತಿಯವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಕೊಡಮಾಡುವ 2022-23ನೇ ಸಾಲಿನ ಪ್ರತಿಷ್ಠಿತ ಡಾ.ಬಿ.ಆರ್.ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸಿದರು.
ರಾಜ್ಯ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ಮಾತನಾಡಿ, ಮಾರ್ಚ್ 10ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಜಿಲ್ಲೆಯ ಆಯಾ ತಾಲ್ಲೂಕು ಘಟಕಕ್ಕೆ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಶಿವಮೊಗ್ಗ ನಗರದ ಪತ್ರಕರ್ತರು ಮೀಡಿಯಾ ಹೌಸ್‌ನಲ್ಲಿ ಪ್ರತಿದಿನ ಸಂಜೆ 5ರಿಂದ 6:30ರೊಳಗಾಗಿ ಅರ್ಜಿಗಳನ್ನು ಪಡೆದು ಭರ್ತಿಮಾಡಿ ಸಲ್ಲಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ವೈದ್ಯ, ಕೆ.ಆರ್.ಸೋಮನಾಥ್, ರಂಜಿತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post