ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಯುವ ಜನಾಂಗವು ಬಿ.ಎಸ್. ಯಡಿಯೂರಪ್ಪ ಅವರ ಸಾಮಾಜಿಕ ಕಳಕಳಿ, ಹೋರಾಟದ ಮನೋಭಾವವನ್ನು ಸರಿಯಾಗಿ ಅರ್ಥೈಸಿ ತಮ್ಮ ಭವ್ಯ ಭವಿತವ್ಯವನ್ನು ರೂಪಿಸಿಕೊಂಡು ಸಮಾಜಮುಖಿಗಳಾಗಿ ಸಚ್ಚಾರಿತ್ರ್ಯದ ಮಾರ್ಗದಲ್ಲಿ ಅಸಾಧಾರಣ ಯಶಸ್ಸನ್ನು ಪಡೆಯುವಂತೆ ಪಿ ಇ ಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ ಸಲಹೆ ನೀಡಿದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ B S Yadiyurappa ನವರ 80ನೇ ಜನ್ಮದಿನಾಚರಣೆಯ ಅಂಗವಾಗಿ ರೋಟರಿ ಮಿಡ್ ಟೌನ್ ಚಾರಿಟೇಬಲ್ ಫೌಂಡೇಷನ್ ಹಾಗೂ ಪಿ ಇ ಎಸ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅನವರತವಾಗಿ ಶ್ರಮಿಸಿದ ಬಿ ಎಸ್ ವೈ ನಡೆದು ಬಂದ ಹಾದಿಯ ಪಕ್ಷಿನೋಟ ವಿವರಣೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ ಅವರ ಜನಾನುರಾಗಿತನ ಮತ್ತು ಸಾಹಸಗಾಥೆಯ ವಿವಿಧ ಮಜಲುಗಳ ಸಂಕ್ಷಿಪ್ತ ಸವಿವರಣೆಯನ್ನು ವಿವಿಧ ಘಟನಾವಳಿಗಳ ಮೂಲಕ ಮೆಲುಕು ಹಾಕಿದರು.
ರೋಟರಿ ಮಿಡ್ ಟೌನ್ ಚಾರಿಟೇಬಲ್ ಫೌಂಡೇಶನ್ ರಕ್ತದಾನ ಸಂಸ್ಥೆಯ ಸಾಮಾಜಿಕ ಸಂಪರ್ಕ ಅಧಿಕಾರಿ ಸತೀಶ್ ಮಾತನಾಡಿ, ರಕ್ತದಾನದ ಸದುದ್ದೇಶ ಹಾಗೂ ಪ್ರಾಮುಖ್ಯತೆಯನ್ನು ವಿವರಿಸಿ, ಉಪಸ್ಥಿತರಿದ್ದ ವಿದ್ಯಾರ್ಥಿ ಸಮೂಹವನ್ನು ರಕ್ತದಾನ ಮಾಡುವಂತೆ ಸಕಾರಾತ್ಮಕವಾಗಿ ಹುರಿದುಂಬಿಸಿದರು.
Also read: ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕಾಗಿ ಅರ್ಜಿ ಆಹ್ವಾನ
ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂಬ ನಾಣ್ಣುಡಿಯಂತೆ ಸಾಮಾಜಿಕವಾಗಿ ತಮ್ಮದೇ ಆದ ಕೊಡುಗೆಗಳನ್ನು ತಾವು ಬೆಳೆದು ಬಂದ ಸಮಾಜಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ನೀಡುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚ್ಯವಾಗಿ ತಿಳಿಸಿದರು.
ಸಮಾರಂಭದಲ್ಲಿ ಪಿಇಎಸ್ಐಟಿಎಂನ ಪ್ರಾಂಶುಪಾಲ ಡಾ. ಚೈತನ್ಯ ಕುಮಾರ್, ಪಿಇಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಗೌತಮ್, ಪಿಇಎಸ್ ಐಎಎಮ್ ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಅರುಣ ಉಪಸ್ಥಿತರಿದ್ದರು.
ಪಿಇಎಸ್ಐಟಿಎಂ ಮತ್ತು ಪಿಇಎಸ್ಐಎಎಮ್ಎಸ್ ನ ಎಲ್ಲಾ ವಿಭಾಗಗಳ ಬೋಧಕ ಬೋಧಕೇತರ ಸಿಬ್ಬಂದಿ, ವಿಭಾಗಿಯ ಮಟ್ಟದ ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳು ಹಾಗೂ ಸ್ವ ಇಚ್ಛೆಯ ವಿದ್ಯಾರ್ಥಿ ಸಮೂಹವು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಒಟ್ಟಾರೆಯಾಗಿ 135 ರಕ್ತದ ಯೂನಿಟ್ ಗಳನ್ನು ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ದಾನಿಗಳಿಗೆ ಲಘು ಉಪಹಾರ ಹಾಗೂ ತಂಪು ಪಾನೀಯದ ವ್ಯವಸ್ಥೆಯನ್ನು ಈ ಸಂದರ್ಭದಲ್ಲಿ ಕಲ್ಪಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post