ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾ ವಿಶ್ವೇಶ್ವರಯ್ಯನವರ ಕನಸಿನ ಕೂಸು. ನಮ್ಮ ಮೈಸೂರು ಮಹಾರಾಜರ ಕೊಡುಗೆ ಹಾಗೂ ನೂರು ವರ್ಷ ಪೂರೈಸಿರುವ ಭಾರತ ದೇಶದ ಮೊಟ್ಟ ಮೊದಲ ಕಾರ್ಖಾನೆ.
ಶಿವಮೊಗ್ಗ ಜಿಲ್ಲೆಯ ಕಿರೀಟಪ್ರಾಯವಾದ ವಿಐಎಸ್‌ಎಲ್, ಆರೂವರೆ ಕೋಟಿ ಕನ್ನಡಿಗರ ಹೆಮ್ಮೆಯ ಆಸ್ತಿ. ಭದ್ರಾವತಿಯ ಜೀವನಾಡಿಯಾದ ಈ ಕಾರ್ಖಾನೆ ಮಲೆನಾಡಿನ ಹೆಮ್ಮೆಯ ಕಳಸ. ಇಲ್ಲಿನ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕಾಗದ ಹಾಗೂ ಸಿಮೆಂಟ್ ಕಾರ್ಖಾನೆ ಪ್ರಪಂಚಕ್ಕೆ ಹೆಸರುವಾಸಿಯಾದುದು. ಇಂತಹ ಕಾರ್ಖಾನೆಯ ಶತಮಾನೋತ್ಸವವನ್ನು ಆಚರಿಸುವುದಕ್ಕೆ ಬದಲಾಗಿ ಮುಚ್ಚಲು ಮುಂದಾಗಿರುವುದು ಖಂಡನೀಯ.
ಭದ್ರಾವತಿಯ ಕಾರ್ಖಾನೆಗೆ ಇರುವಂತಹ ಸೌಕರ್ಯಗಳು ಭಾರತದ ಯಾವ ಕಾರ್ಖಾನೆಗೂ ಇರುವುದಿಲ್ಲ. ಕಾರ್ಖಾನೆಗೆ ಬೇಕಾಗುವ ಎಲ್ಲಾ ಪದಾರ್ಥಗಳು ಇಲ್ಲಿ ಲಭ್ಯವಾಗುತ್ತದೆ. ಈ ಕಾರ್ಖಾನೆ ಇದ್ದುದರಿಂದಲೇ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಹೆಚ್ಚು ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಇಂದು ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ಈ ಕಾರ್ಖಾನೆ ಉಳಿದಲ್ಲಿ ವ್ಯಾಪಾರಕ್ಕೆ ಅನುಕೂಲ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬಹುದು. ಇಲ್ಲಿ ಕಮ್ಮಾರರು, ಕುಲುಮೆಗಳು ಜಾಸ್ತಿಯಿದ್ದು, ಆಯುಧಗಳನ್ನು ತಯಾರು ಮಾಡಿ ಹೊರ ರಾಜ್ಯಕ್ಕೆ ಕಳುಹಿಸುತ್ತಿದ್ದರು. ಇದರಿಂದ ಕಾರ್ಖಾನೆಯನ್ನು ಸ್ಥಾಪಿಸುವುದಕ್ಕೆ ಒಂದು ಕಾರಣವೂ ಹೌದು.
ಈ ಊರು ಪುರಾಣ ಇತಿಹಾಸದಿಂದ ಕೂಡಿದೆ. ಇಲ್ಲಿ ಭದ್ರಾ ನದಿಯು ಪಶ್ಚಿಮವಾಹಿ. ಇಲ್ಲಿನ ಕ್ಷೇತ್ರಾಧಿಪತಿ ಶ್ರೀ ಲಕ್ಷ್ಮೀನರಸಿಂಹ ದೇವರ ಉಪಾಸಕರು ನಂಕೀ ಮಹರ್ಷಿಗಳ ತಪಸ್ಸಿಗೆ ದೇವರು ಪ್ರತ್ಯಕ್ಷ ದರ್ಶನ ಕೊಟ್ಟ ಕಾರಣ ಆ ಋಷಿಗಳ ಹೆಸರಿನಂತೆ ನಂಕೀಪುರವೆಂದು ಕರೆಯಲಾಯಿತು. ನಂತರ ಕಾಲಕ್ರಮೇಣ ಬೆಂಕೀಪುರವೆಂದು ನಾಮಕರಣ ಮಾಡಲಾಯಿತು.
ಒಮ್ಮೆ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಈ ಸ್ವಾಮಿಯನ್ನು ದರ್ಶನ ಮಾಡಿ ಇದು ತಪೋ ಭೂಮಿಯಾಗಿದ್ದು, ಇಲ್ಲಿ ಕಾರ್ಖಾನೆ ಸ್ಥಾಪಿಸಿದರೆ ಹೆಚ್ಚು ಲಾಭದಾಯಕವೂ ಹಾಗೂ ಹೆಚ್ಚು ಅಭಿವೃದ್ಧಿಯೂ ಆಗುತ್ತದೆ ಎಂದು ಕಾರ್ಖಾನೆಯನ್ನು ಸ್ಥಾಪಿಸಲು ಮುಂದಾದರು. ಭದ್ರಾ ನದಿ ಹರಿಯುವುದರಿಂದ ಭದ್ರಾವತಿ ಎಂದು ನಾಮಕರಣ ಮಾಡಿದರು. ಆಗ ರಾಜರಿಗೂ ವಿಶ್ವೇಶ್ವರಯ್ಯನವರಿಗೂ ವಾದ ವಿವಾದಗಳು ನಡೆದು ತಮ್ಮ ಅಭಿಪ್ರಾಯದಂತೆ ಇಲ್ಲೇ ಆಗಬೇಕು ಇಲ್ಲವಾದಲ್ಲಿ ನಾನು ದಿವಾನಗಿರಿಯನ್ನು ಬಿಡುತ್ತೇನೆ ಎಂದು ತಿಳಿಸಿದರು. ಅಂದರೆ ಈ ಊರಿನ ಕಾರ್ಖಾನೆಯ ಬಗ್ಗೆ ಅವರಿಗೆ ಅಭಿಮಾನವೆಷ್ಟು ಎಂಬುದು ಈ ಮೂಲಕ ನಾವು ತಿಳಿಯಬಹುದಾಗಿದೆ.
ಇಂತಹ ಕಾರ್ಖಾನೆಗೆ ಸಾವಿರಾರು ಜನರು ತಮ್ಮ ಜೀವನವನ್ನೇ ಧಾರೆಯೆರೆದು ನಡೆಸಿಕೊಂಡು ಬಂದಿದ್ದು, ದಯವಿಟ್ಟು ಕಾರ್ಖಾನೆ ಮುಚ್ಚಿ ಅವರಿಗೆ ದ್ರೋಹ ಬಗೆಯಬಾರದು. ಕಾರ್ಖಾನೆ ಮುಚ್ಚಲು ಸ್ಥಿತಿಗೆ ಬರಲು ಸಾಕಷ್ಟು ಜನರು ಕಾರಣರಾಗಿರುತ್ತಾರೆ. ಈಗಾಗಲೇ ಈ ವಿಷಯ ಕಾರ್ಮಿಕರೆಲ್ಲರಿಗೂ ತಿಳಿದಿರುವ ವಿಷಯ. ಇದರಿಂದ ಯಾರನ್ನು ದೂಷಿಸಿದರೂ ಪ್ರಯೋಜನವಿಲ್ಲ. ಆದರೆ ಮುಂದೆ ಆಗುವ ಒಳ್ಳೆಯ ಕಾರ್ಯಗಳಿಗಾಗಿ ಕಾರ್ಖಾನೆಯನ್ನು ಉಳಿಸುವ ಕೆಲಸಕ್ಕೆ ಕೈಜೋಡಿಸೋಣ. ಇದು ದೇವರ ಅನುಗ್ರಹದಿಂದ ಮಾತ್ರ ಸಾಧ್ಯ.
ಕಾರ್ಖಾನೆಯು ಉಳಿಯಲು ಸಾಧ್ಯ. ಏಕೆಂದರೆ, ಕೇಂದ್ರ ಹಾಗೂ ರಾಜ್ಯಸರ್ಕಾರ, ಕರ್ನಾಟಕದಿಂದ ಆರಿಸಿ ಕಳುಹಿಸಿದ ಸಂಸದರು ಮತ್ತು ಶಿವಮೊಗ್ಗ ಜಿಲ್ಲಾ ವಿಧಾನಸಭಾ ಸದಸ್ಯರು ಹಾಗೂ ಕಾರ್ಖಾನೆಯ ಎಲ್ಲಾ ನಿವೃತ್ತ ಕಾರ್ಮಿಕರು, ಕ್ಷೇತ್ರ ಶಾಸಕರು ಬಂಡವಾಳ ಹೂಡುವ ಮನಸ್ಸು ಮಾಡುವ ದಾನಿಯನ್ನು ಕರೆತರಬೇಕು. ಶ್ರೀ ಲಕ್ಷ್ಮೀನರಸಿಂಹ ದೇವರು ಒಳ್ಳೆಯ ಮನಸ್ಸು ಹಾಗೂ ಬುದ್ಧಿಯನ್ನು ಕೊಡಬೇಕು ಹಾಗೂ ಯಾವುದೇ ದುರಾಲೋಚನೆ ಇಲ್ಲದೆ ಕಾರ್ಖಾನೆ ಮುಚ್ಚುವ ಮನಸ್ಸು ಮಾಡುವ ಪ್ರಯತ್ನ ಮಾಡದೇ ಇದ್ದಲ್ಲಿ ಮಾತ್ರ ಕಾರ್ಖಾನೆಯು ಖಂಡಿತವಾಗಿಯೂ ನಡೆಯುವುದರಲ್ಲಿ ಅನುಮಾನವಿಲ್ಲ.
Also read: ಸಚ್ಚಾರಿತ್ರ್ಯದ ಮಾರ್ಗದಲ್ಲಿ ಯಶಸ್ಸು ಪಡೆಯಲು ಬಿಎಸ್‌ವೈ ಜೀವನಾದರ್ಶ ಮಾದರಿ: ನಾಗರಾಜ್
ನಾವೆಲ್ಲರೂ ದೇವರನ್ನು ಪ್ರಾರ್ಥಿಸೋಣ… ನಾವು ಈಗಾಗಲೇ ನಮ್ಮ ದೇವಸ್ಥಾನದಲ್ಲಿ ಕಾರ್ಖಾನೆ ಸಲುವಾಗಿ ಸಂಕಲ್ಪ ಮಾಡಿ ಜಪವನ್ನು ಮಾಡಲು ಆರಂಭಿಸಿದ್ದೇವೆ. ಹಾಗೂ ಎಲ್ಲಾ ದೇವಾಲಯದ ಅರ್ಚಕರಿಗೂ ಜಪ ಮಾಡುವಂತೆ ಮನವಿ ಮಾಡಿದ್ದೇವೆ, ಅದರಂತೆ ಎಲ್ಲಾ ಕಾರ್ಮಿಕ ಬಂಧುಗಳು ಅವರ ಮನೆಯಲ್ಲಿ ಕಾರ್ಖಾನೆಯು ಮುಚ್ಚದಿರುವಂತೆ ಪ್ರಾರ್ಥಿಸಿ ದಿನಕ್ಕೆ 108ಕ್ಕೆ ಕಡಿಮೆ ಇಲ್ಲದಂತೆ ಹೆಚು ಹೆಚ್ಚು ನರಸಿಂಹ ಮೂಲ ಮಂತ್ರವನ್ನು ಜಪವನ್ನು ಮಾಡಿ ಖಂಡಿತ ಕಾರ್ಖಾನೆಯು ಪುನಃ ನಡೆಯುವುದರಲ್ಲಿ ಸಂದೇಹವಿಲ್ಲ.
ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ
ನರಸಿಂಹಂ ಭೀಷಣಂ ಭದ್ರೆಮೃತ್ಯೋ ಮೃತ್ಯುವಿನಮಾಮ್ಯಹಂ
ಈಗಾಗಲೇ ಸುಮಾರು ಮೂರು-ನಾಲ್ಕು ವರ್ಷದ ಹಿಂದೆ ಕೂಡಲಿಯ ಕ್ಷೇತ್ರಕ್ಕೆ ಸುಮಾರು 30-40 ವರ್ಷಗಳಿಂದ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಅದರ ಪರಿಹಾರಕ್ಕಾಗಿ ಒಂದು ಕೋಟಿ ನರಸಿಂಹ ಮೂಲಮಂತ್ರ ಜಪವನ್ನು ಮಾಡಿದ್ದು ಎಲ್ಲವೂ ಪರಿಹಾರವಾಯ್ತು. ಆ ಸಂದರ್ಭದಲ್ಲಿ ಜಪ ಮಾಡಿದ ಎಲ್ಲರೂ ಉತ್ತಮ ಫಲವನ್ನು ಪಡೆದಿರುತ್ತಾರೆ. ಈ ಮಂತ್ರ ಜಪದಿಂದ ಈ ಕಾರ್ಖಾನೆ ಹಾಗೂ ತಮ್ಮ ನೆಮ್ಮದಿ ಇಷ್ಟಾರ್ಥಗಳು ಲಭಿಸುವುದು ಖಂಡಿತ. ಈ ಮಂತ್ರಕ್ಕೆ ಮಂತ್ರರಾಜ ಎಂದು ಕರೆಯುತ್ತಾರೆ.
ಅದರಂತೆ ಎಲ್ಲಾ ಸಹಸ್ರನಾಮ ಮಂಡಳಿ, ಭಜನಾ ಮಂಡಳಿಗಳು ಹೆಚ್ಚು ಹೆಚ್ಚು ಜಪವನ್ನು ಮನೆಗಳಲ್ಲಾಗಲೀ, ದೇವಾಲಯಗಳಲ್ಲಾಗಲೀ, ಮಠಗಳಲ್ಲಾಗಲಿ ಜನಸೇರಿ ಒಂದೇ ಮನಸ್ಸಿನಿಂದ ಜಪ ಮಾಡಿ ಎಲ್ಲಾ ಅರ್ಚಕರು, ಉಪಾಸಕರು ಕೈಜೋಡಿಸಿ ಕಾರ್ಖಾನೆಯ ಉಳಿವಿಗಾಗಿ ಜಪಿಸಿ ದೇವರನ್ನು ಪ್ರಾರ್ಥಿಸೋಣ. ಮತ್ತೊಮ್ಮೆ ಬೆಂಕಿಪುರವಾಗದಂತೆ ಭದ್ರಾವತಿಯ ಹೆಸರೇ ಉಳಿಯಬೇಕು ಎಂದು ಪ್ರಾರ್ಥಿಸೋಣ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ವಿದ್ವಾನ್ ಎಸ್. ರಂಗನಾಥ ಶರ್ಮಾ, ಪ್ರಧಾನ ಅರ್ಚಕರು, ಲಕ್ಷ್ಮೀ ನರಸಿಂಹ ದೇವಸ್ಥಾನ, ಭದ್ರಾವತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post