ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರವಾದ ರೇಡಿಯೋ ಶಿವಮೊಗ್ಗ 90.8 ಎಫ್ ಎಂ ನಲ್ಲಿ ಕಾರ್ಯಕ್ರಮ ಪ್ರಸಾರ ಆರಂಭವಾಗಿ ಏ.22ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಈ ಪಯಣದಲ್ಲಿ ಸಹಕಾರ ನೀಡಿದ ಎಲ್ಲಾ ಕೇಳುಗರಿಗೆ, ಜಾಹೀರಾತುದಾರರು ಹಾಗೂ ಹಿತೈಷಿಗಳಿಗೆ ಬಾನುಲಿ ಕೇಂದ್ರದ ನಿರ್ದೇಶಕರಾದ ಜಿ.ಎಲ್. ಜನಾರ್ದನ್ ಆತ್ಮೀಯ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಿಡ್ಸ್ (ಕೊಡಚಾದ್ರಿ ಡೆವೆಲ್ ಪ್ಮೆಂಟ್ ಸೊಸೈಟಿ)ಯ ಕನಸಿನ ಯೋಜನೆ ಈ ಬಾನುಲಿ ಕೇಂದ್ರವಾಗಿದೆ. ಈ ಒಂದು ವರ್ಷದ ಪಯಣದಲ್ಲಿ ಲಕ್ಷಾಂತರ ಕೇಳುಗರ ಹೃನ್ಮನಗಳನ್ನು ರೇಡಿಯೋ ತಲುಪಿದೆ. ದಿನದ 24 ತಾಸೂ ರೇಡಿಯೋ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ. ರೇಡಿಯೋ ಶಿವಮೊಗ್ಗ ಆಪ್ ನ ಮುಖಾಂತರ ಜಗತ್ತಿನಾದ್ಯಂತ 176 ರಾಷ್ಟ್ರಗಳಲ್ಲಿ ಕೇಳುಗ ವಲಯವನ್ನು ವಿಸ್ತರಿಸಿಕೊಂಡಿರುವುದು ನಮ್ಮ ರೇಡಿಯೋದ ಹೆಮ್ಮೆಯಾಗಿದೆ. ಕೇಳುಗರ ವಿನಂತಿಯ ಮೇರೆಗೆ, ಅನೇಕಾನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಮುದಾಯ ಬಾನುಲಿಯಾಗಿ ತನ್ನ ಛಾಪು ಮೂಡಿಸುತ್ತಿರುವುದು ಸಂತಸ ತಂದಿದೆ ಎಂದರು.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕೃಷಿ, ಅರಣ್ಯ, ತೋಟಗಾರಿಕೆ, ಪಶುಸಂಗೋಪನೆ, ವಾಣಿಜ್ಯ, ಶಿಕ್ಷಣ, ಕಲೆ, ಸಂಸ್ಕೃತಿ, ಸ್ಥಳೀಯ ಭಾಷೆಗಳು, ಪರಿಸರ, ಗುಡಿಕೈಗಾರಿಕೆ, ಬ್ಯಾಂಕಿಂಗ್, ಆರೋಗ್ಯ, ಕೈಗಾರಿಕೆ, ಸೇವಾ ಕ್ಷೇತ್ರ, ಡಿಜಿಟಲ್ ತಂತ್ರಜ್ಞಾನ ಇನ್ನಿತರ ವಿಷಯಾಧಾರಿತ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿದೆ. ಶ್ರವಣ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನೂ ಒಳಗೊಳ್ಳುವುದು ನಮ್ಮ ಆಶಯವಾಗಿದೆ. ನಮ್ಮ ಆಪ್ ನ ಪಾಡ್‌ಕಾಸ್ಟ್ ಮೂಲಕ ಮುಖ್ಯ ಕಾರ್ಯಕ್ರಮಗಳ ಆಡಿಯೋವನ್ನು ಕೇಳುಗರು ತಮಗೆ ಬೇಕೆಂದಾಗ ಮತ್ತೆ ಮತ್ತೆ ಕೇಳಿಸಿಕೊಳ್ಳುವ ಅವಕಾಶವನ್ನು ರೇಡಿಯೋ ಶಿವಮೊಗ್ಗ ಎಫ್.ಎಂ. ಒದಗಿಸುತ್ತದೆ ಎಂದಿದ್ದಾರೆ.

Also read: ಗ್ಯಾಂಗ್’ಸ್ಟರ್ ಅತೀಕ್ ಅಹ್ಮದ್ ಸಮಾಧಿ ಮೇಲೆ ರಾಷ್ಟ್ರಧ್ವಜ: ಕಾಂಗ್ರೆಸ್ ನಾಯಕನ ಬಂಧನ
ನಮ್ಮ ರೇಡಿಯೋ ಶಿವಮೊಗ್ಗದ ಒಂದು ವರ್ಷದ ಪಯಣದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಶಿಕ್ಷಣ ತಜ್ಞರು, ಪರಿಸರ ವಿಜ್ಞಾನಿಗಳು, ಜನಪದ ತಜ್ಞರು, ರೈತವಿಜ್ಞಾನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ಪಾಠಗಳು, ಶಿಕ್ಷಕರಿಗೆ ಅಗತ್ಯವಾದ ವಿದ್ಯಾಗಮ ಆನ್ ಲೈನ್ ತರಬೇತಿ ಕಾರ್ಯಕ್ರಮಗಳು ನಮ್ಮ ರೇಡಿಯೋದಲ್ಲಿ ಬಿತ್ತರವಾಗಿದೆ. ವಿಶೇಷವಾಗಿ ರೇಡಿಯೋ ಮುಖಾಂತರ ಬದುಕಿಗಾಗಿ ರಂಗಪಾಠಗಳನ್ನು ಬಿತ್ತರಿಸುತ್ತಾ,ಅಭಿನಯದ ಕುರಿತಾಗಿ ದೂರಶಿಕ್ಷಣದ ಸರ್ಟಿಫಿಕೇಟ್ ಕೋರ್ಸ್ ನ್ನು ನಡೆಸಲಾಗಿದೆ. ವಿವಿಧ ದಿನಾಚರಣೆಗಳಿಗೆ ಕೂಡಾ ಕಾರ್ಯಕ್ರಮಗಳನ್ನು ನಡೆಸಿದೆ. ವೈದ್ಯರ ಸಂದರ್ಶನ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು, ಶಾಸಕರು, ಮಹಾಪೌರರ ಜೊತೆಗೆ ನೇರಪ್ರಸಾರದ ಸಂವಾದ ನಡೆಸಲಾಗಿದೆ. ತೃತೀಯ ಲಿಂಗಿ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ, ಹಿರಿಯ ಚಲನಚಿತ್ರ ಕಲಾವಿದ ರಮೇಶ್ ಭಟ್ ಅವರೊಂದಿಗೆ ಸಂದರ್ಶನ ನಡೆಸಲಾಗಿದೆ. ಪಂಚಾಯತ್ ರಾಜ್ ಸಚಿವಾಲಯದ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಜನರ ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾದ ವಿಶೇಷ ಕಾರ್ಯಕ್ರಮಗಳು ಕೂಡಾ ಪ್ರಸಾರವಾಗುತ್ತಿದೆ. ದೇಶದ ಚಾರಿತ್ರಿಕ ಪುಟದಲ್ಲಿ ಸದಾ ರಾರಾಜಿಸುವ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಬರಹಗಳು- ಚಿಂತನೆಗಳನ್ನು ಪ್ರತಿದಿನ ರೇಡಿಯೋದಲ್ಲಿ ಪ್ರಸಾರ ಮಾಡುತ್ತಿರುವುದು ಮತ್ತೊಂದು ಸಂತಸದ ಸಂಗತಿಯಾಗಿದೆ.
ಜಿ.ಎಲ್. ಜನಾರ್ದನ್, ನಿಲಯದ ನಿರ್ದೇಶಕರು, ರೇಡಿಯೋ ಶಿವಮೊಗ್ಗ 90.8 ಎಫ್ ಎಂ. ಶಿವಮೊಗ್ಗ










Discussion about this post