ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜ.೨೬ರಂದು ಸಂಜೆ ಆರ್’ಎಂಎಸ್ ನಗರದ ಕಿದ್ವಾಯಿ ಶಾಲೆಯ ಬಳಿ ವಿದ್ಯಾರ್ಥಿಗಳ ಮೇಲೆ ಹಾಗೂ ಅವರ ಪೋಷಕರ ಮೇಲೆ ನಡೆದ ಹಲ್ಲೆ ತೀರಾ ಖಂಡನೀಯ ಎಂದು ಕೆಎಸ್’ಎಸ್’ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆರ್’ಎಂಎಲ್ ನಗರ, ಅಣ್ಣನಗರ ಹಾಗೂ ಮಂಜುನಾಥ ಬಡಾವಣೆಯ ಸುತ್ತಮುತ್ತಲಿನ ನಾಗರೀಕರ ಹಿತರಕ್ಷಣೆಗೆ ಭಂಗ ತರುತ್ತಿರುವ ಅಲ್ಲಿನ ಗೂಂಡಾಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಆರ್’ಎಂಎಲ್ ನಗರ, ಮಂಜುನಾಥ ಬಡಾವಣೆಗಳಲ್ಲಿ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ಅನ್ಯಕೋಮಿನ ಗೂಂಡಾಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ. ಅಲ್ಲಿನ ಕೆಲ ಅಂಗಡಿಗಳ ಮುಂದೆ ಹಾಗೂ ಏರಿಯಾದ ಕೆಲ ವೃತ್ತಗಳಲ್ಲಿ ಗುಂಪುಗಾರಿಕೆ ನಡೆಸುವ ಮೂಲಕ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಹಿರಿಯರಿಗೆ ಅಗೌರವದಿಂದ ನಡೆದುಕೊಳ್ಳುವುದು, ರಾಬರಿ ಮಾಡುವುದು ನೆಡೆಯುತ್ತಿದೆ. ಬೈಕ್ ಕಳ್ಳತನ ಮಾಡುವುದು, ಇಸ್ಪೀಟ್, ಓಸಿ ದಂಧೆ ನಡೆಸುವುದು ಇಲ್ಲಿ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಗಾಂಜಾ ಸೇವನೆ ಹಾಗೂ ಮಾರಾಟದ ಅಡ್ಡೆಯಾಗಿ ಈ ಬಡಾವಣೆಗಳು ಮಾರ್ಪಾಡಾಗುತ್ತಿದೆ ಎಂದರು.
ಈ ಹಿಂದೆ ಆ ಭಾಗದಲ್ಲಿ ಅನೇಕ ಅಹಿತಕರ ಘಟನೆಗಳು ಘಟಿಸಿದೆ. ಅಲ್ಲಿನ ಪುಂಡರು ಆರ್’ಎಂಎಲ್ ನಗರದ ಕಿಣಿ ಲೇಔಟ್’ನ ಶನೇಶ್ವರ ದೇವಸ್ಥಾನದ ಕಾಂಪೌಂಡಿಗೆ ಮೂತ್ರ ವಿಸರ್ಜನೆ ಮಾಡುವುದು, ಅಲ್ಲಿಯ ಅರ್ಚಕರಿಗೆ ಹೆದರಿಸುವುದಲ್ಲದೆ ಅಲ್ಲಿನ ಚೌಡೇಶ್ವರಿ ದೇವರ ವಿಗ್ರಹವನ್ನು ಚರಂಡಿಯಲ್ಲಿ ಹಾಕುವಂತಹ ಹೇಯ ಕೃತ್ಯ ಎಸಗಿದ್ದರು. ಅಣ್ಣಾ ನಗರ ಭಾಗದಲ್ಲಿ ಒಬ್ಬ ಸಾಮಾನ್ಯ ದಿನಸಿ ವ್ಯಾಪಾರಿ ಶಿವಮೂರ್ತಿ ಎಂಬುವವರ ಅಂಗಡಿಗೆ ನುಗ್ಗಿ ಮಾಮೂಲಿ ವಸೂಲಿ ಮಾಡಿದ್ದು ಹಣ ಕೊಡದಿದ್ದರೆ ಅಂಗಡಿಯನ್ನು ಖಾಲಿ ಮಾಡಿಸುವುದಾಗಿ ಧಮ್ಕಿ ಹಾಕಿದ್ದರು. ಇವನ್ನೆಲ್ಲಾ ಪೊಲೀಸರ ಗಮನಕ್ಕೆ ಕೂಡ ತರಲಾಗಿದೆ. ಆದರೂ ಕೂಡ ಇಂತಹ ಕೃತ್ಯಗಳು ಇಲ್ಲಿ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ ಎಂದಿದ್ದಾರೆ.
ಇನ್ನು ಕೃಷ್ಣ ರೈಸ್ ಮಿಲ್, ಕಿಣಿ ಲೇಔಟ್, ಕಿದ್ವಾಯಿ ಶಾಲೆಯ ಆವರಣ ಹೀಗೆ ಅಲ್ಲಿನ ಖಾಲಿ ನಿರ್ಜನ ಪ್ರದೇಶಗಳಲ್ಲಿ ಪ್ರತಿನಿತ್ಯ ಗಾಂಜಾ ಸೇವನೆ ಮಾಡುವುದು, ಗಾಂಜಾ ಮತ್ತಿನಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡುವುದು, ಹೆದರಿಸುವುದು ಹೀಗೆ ಅಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅಲ್ಲದೆ ಒಂದೇ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಈ ಎಲ್ಲಾ ಕೃತ್ಯವನ್ನು ಮಾಡುತ್ತಿರುವುದು ಅತ್ಯಂತ ಆಕ್ರೋಶದ ಸಂಗತಿ ಎಂದಿದ್ದಾರೆ.
ಈ ಪ್ರದೇಶಗಳು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಸಣ್ಣ ಸಣ್ಣ ಘಟನೆಗಳು ಸಹ ದೊಡ್ಡದಾಗುತ್ತದೆ. ಹಾಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಈ ಕೂಡಲೇ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಅಲ್ಲಿನ ಜನತೆಯ ಬೇಡಿಕೆಯಂತೆ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು, ಪೊಲೀಸ್ ಗಸ್ತು ತಿರುಗುವುದನ್ನು ಇನ್ನಷ್ಟು ಹೆಚ್ಚಿಸುವುದು, ಅಲ್ಲಿಯ ಇಂತಹ ದುಷ್ಕೃತ್ಯಕ್ಕೆ ಕಾರಣವಾಗುವಂತಹ ಗೂಂಡಾಗಳನ್ನು ಈ ಕೂಡಲೇ ಬಂಧಿಸಿ, ಅವರ ಮೇಲೆ ಗೂಂಡಾ ಕಾಯ್ದೆಯನ್ನು ಹೇರಿ ಆ ಪ್ರದೇಶದ ಜನತೆಯ ಹಿತರಕ್ಷಣೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post