ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ #B S Yadiyurappa ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಅನಾವಶ್ಯಕವಾಗಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ #Ayanuru Manjunath ಅವರು ಬಿ.ಎಸ್.ವೈ. ಕುಟುಂಬದ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಹರತಾಳು ಹಾಲಪ್ಪ #Harathalu Halappa ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್.ವೈ. ಅವರಿಂದಲೇ ರಾಜಕೀಯವಾಗಿ ಬೆಳೆದು ಹಲವು ಸ್ಥಾನಮಾನಗಳನ್ನು ಕಂಡ ಆಯನೂರು ಮಂಜುನಾಥ್ ಈಗ ಅವರ ಪಕ್ಷದಲ್ಲಿನ ಕೆಲವು ನಾಯಕರ ಮನವನ್ನು ಮೆಚ್ಚಿಸುವುದಕ್ಕಾಗಿ ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಯಡಿಯೂರಪ್ಪನವರು ಬೇರೆ ರಾಜಕಾರಣಿಗಳಂತೆ ತಾಂತ್ರಿಕವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದವರಲ್ಲ. ನ್ಯಾಯಾಲಯದಲ್ಲಿ ತಮ್ಮ ಎಲ್ಲಾ ಹಗರಣಗಳ ವಿಚಾರಣೆಯನ್ನು ಎದುರಿಸಿ ಕ್ಲೀನ್ ಚಿಟ್ ತೆಗೆದುಕೊಂಡವರು. ಅಂತಹ ನಾಯಕರ ಬಗ್ಗೆ ಮತ್ತು ಹಿರಿತನದ ಬಗ್ಗೆ ಅರಿವಿಲ್ಲದೆ ಆಯನೂರು ಮಂಜುನಾಥ್ ರವರು ಬಹಳ ಹಗುರವಾಗಿ ಮಾತನಾಡಿದ್ದಾರೆ ಇದನ್ನು ನಮ್ಮ ಪಕ್ಷ ಖಡಾಖಂಡಿತವಾಗಿ ಖಂಡಿಸುತ್ತದೆ ಎಂದು ಹೇಳಿದರು.
ನಾನು ಸಹ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವನು. ಅವರ ಸಖ್ಯ ತೊರೆದ ನಂತರ ಎಂದೂ ಸಹ ಅವರ ಬಗ್ಗೆ ಮಾತನಾಡಲಿಲ್ಲ. ಕಾಗೋಡು ತಿಮ್ಮಪ್ಪನವರ ಬಗ್ಗೆಯೂ ಕೂಡ ನಾನು ಮಾತನಾಡಿಲ್ಲ. ಏಕೆಂದರೆ ಅವರ ಹಿರಿತನವನ್ನು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದರು.
ಎಸ್. ರುದ್ರೇಗೌಡ ಮಾತನಾಡಿ, ಯಾರಿಂದ ಆಯನೂರು ಮಂಜುನಾಥ್ ರಾಜಕೀಯವಾಗಿ ಬೆಳೆದರೋ ಅವರ ಬಗ್ಗೆಯೇ ಕೆಟ್ಟ ಭಾವನೆ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಬೇಡದ ವಿಷಯವನ್ನ ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮರೆಮಾಚಲು ಯತ್ನಿಸಿದ್ದಾರೆ. ಒಬ್ಬ ಹಿರಿಯ ನಾಯಕನ ಬಗ್ಗೆ ಆಯನೂರು ಮಾತನಾಡಿರುವುದು ಸರಿಯಲ್ಲ. ಕೂಡಲೇ ಅವರು ಬಿ.ಎಸ್.ವೈ. ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ದತ್ತಾತ್ರಿ. ಮಾಜಿ ಶಾಸಕ ಕೆಜಿ ಕುಮಾರಸ್ವಾಮಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post