ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ, ಅಂಕಪಟ್ಟಿ ಪಡೆಯುವಲ್ಲಿನ ವಿಳಂಬ, ಕೇಂದ್ರೀಕೃತ ಯುಯುಸಿಎಂಎಸ್ ಪೋರ್ಟಲ್ ನಿಂದಾಗುತ್ತಿರವ ತೊಡಕುಗಳು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ #Minister Madhu Bangarappa ಹೇಳಿದರು.
ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ #Kuvempu University ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿ ಹಣಕಾಸು ವಿಷಯದಲ್ಲಿ ಸಂಕಷ್ಟದಲ್ಲಿದ್ದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆಡಳಿತವನ್ನು ವಿವಿ ನಿಯಮಾವಳಿ ಪ್ರಕಾರ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು. ತ್ವರಿತವಾಗಿ ಕೈಗೊಳ್ಳಬೇಕಾದ ಹಣಕಾಸು ವಿಷಯಗಳನ್ನು ಕೈಗೆತ್ತಿಕೊಳ್ಳಬೇಕು. ಏನೇ ಸಮಸ್ಯೆ ಇದ್ದರೂ ನನ್ನನ್ನು ಕರೆಯಿರಿ. ವಿವಿ ಅಭಿವೃದ್ದಿಯಲ್ಲಿ ನಾವೆಲ್ಲ ಭಾಗಿಯಾಗೋಣ ಎಂದು ಮನವಿ ಮಾಡಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿವಿಸಂಪೂರ್ಣವಾಗಿ ಸರ್ಕಾರಿ ಹಣದ ಮೇಲೇ ಅವಲಂಬಿಸದೆ ಸಕ್ರಿಯರಾಗಿ ಸಿಎಸ್ ಆರ್ ನಿಧಿ ಹಾಗೂ ಇತರೆ ಚಟುವಟಿಕೆ ಮೂಲಕ ಅಭಿವೃದ್ಧಿ ಗೆ ಶ್ರಮಿಸಲಾಗುವುದು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ವಿವಿ ವ್ಯಾಪ್ತಿಗೆ ಬರುತ್ತದೆ. ಪ್ರಥಮ ದರ್ಜೆ ಕಾಲೇಜುಗಳ ಅಫಿಲಿಯೇಷನ್ ಗಾಗಿ ಸರ್ಕಾರಕ್ಕೆ ಅರ್ಜಿ ೩೫ ಪ್ರಸ್ತಾವನೆ ಕಳುಹಿಸಿದ್ದೆವು. ಅಫಿಲಿಯೇಷನ್ ದೊರಕದೆ ಕಾಲೇಜು ಆರಂಭಿಸಲು ಸಾಧ್ಯವಿಲ್ಲ. 17 ಸರ್ಕಾರಿ ಕಾಲೇಜು ಅನುಮೋದನೆ ಆಗಿದೆ. 18 ಕಾಲೇಜು ಅನುಮೋದನೆಯಾಗದ ಕಾರಣ ದಾಖಲಾತಿ ಸಾಧ್ಯವಾಗುತ್ತಿಲ್ಲ ವೆಂದರು
ಫಲಿತಾಂಶ ಬೇಗ ನೀಡಲು ಸ್ವಲ್ಪ ತೊಡಕು ಇದೆ. ಯುಯುಸಿಎಂಎಸ್ ಸೆಂಟ್ರಲೈಸ್ಡ್ ಸಾಫ್ಟ್ವೇರ್ ನಿಂದ ಸಣ್ಣಪುಟ್ಟ ಬದಲಾವಣೆ ಕೂಡ ಅತ್ಯಂತ ಕಷ್ಟ ಆಗುತ್ತಿದೆ. 3 ವರ್ಷದಿಂದ ಸ್ನಾತಕೋತ್ತರ ಪದವಿ ಅಂಕಪಟ್ಟಿ ಸಹ ಬಂದಿಲ್ಲ . ವಿಕೇಂದ್ರೀಕರಣ ಆದರೆ ಅನುಕೂಲವಾಗುತ್ತದೆ. ಯುಯುಸಿಎಂಎಸ್ ಪೋರ್ಟಲ್ ನಲ್ಲಿ ದಾಖಲಾತಿ ಹಾಗೂ ಅಂಕಪಟ್ಟಿ ಪಡೆಯುವಲ್ಲಿ ಅನೇಕ ತೊಂದರೆಗಳಿವೆ. ಪಿಯು ಫಲಿತಾಂಶ ಬಂದು 4 ತಿಂಗಳಾದರೂ ದಾಖಲಾತಿ ಸಾಧ್ಯವಾಗಿಲ್ಲ ಎಂದರು.
Also read: Government Cracks Down on Nursing Colleges Over Exorbitant Fees and Substandard Facilities
ಪ್ರಾಧ್ಯಾಪಕರು ಮಾತನಾಡಿ, ಅಫಿಲಿಯೇಷನ್ ದೊರಕದ ಪ್ರಥಮ ದರ್ಜೆ ಕಾಲೇಜುಗಳಿಗೆ ದಾಖಲಾತಿ ಆಗುತ್ತಿಲ್ಲ. ಹಾಗೂ ಸರ್ಕಾರದ ಕೆಲವು ನೀತಿಗಳಿಂದಾಗಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ನಿಲ್ಲಿಸಲಾಗಿದ್ದು ವಿದ್ಯಾರ್ಥಿಗಳು ಮತ್ತು ವಿವಿ ಗೆ ಹಿನ್ನಡೆಯಾಗಿದೆ ಎಂದರು.
ಸಿಂಡಿಕೇಟ್ ಸದಸ್ಯರಾದ ಶ್ರೀಪಾಲ್ ಮತ್ತು ಇತರೆ ಪ್ರಾಧ್ಯಾಪಕರು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಈ ಸೆಂಟ್ರಲೈಸ್ಡ್ ಪೋರ್ಟಲ್ ಇದ್ದು, ರಾಜ್ಯಾದ್ಯಂತ ವಿವಿ ಗಳಲ್ಲಿ ಈ ಸಮಸ್ಯೆಗಳಿವೆ ಎಂದು ತಿಳಿಸಿದರು.
ಸಚಿವರು ಮಧುಬಂಗಾರಪ್ಪ ಮಾತನಾಡಿ, ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮಸ್ಯೆಗಳು ಗಂಭೀರವಾಗಿದ್ದು, ಸಮಸ್ಯೆಗಳ ಪಟ್ಟಿ ನೀಡಿ ಈ ವಿಷಯವಾಗಿ ಆದ್ಯತೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಮಾತನಾಡುತ್ತೇನೆ. ಹಂತ ಹಂತವಾಗಿ ವಿವಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಮುಖ್ಯಮಂತ್ರಿಗಳ ಗಮನಕ್ಕೂ ನಾನು ಈ ಸಮಸ್ಯೆಗಳ ಬಗ್ಗೆ ತಿಳಿಸುತ್ತೇನೆ ಎಂದರು.ಈ ತಿಂಗಳ ಅಂತ್ಯದೊಳಗೆ ಮತ್ತೊಂದು ಸಭೆ ನಡೆಸೋಣ. ಹೊರಗುತ್ತಿಗೆ ನೌಕರರಿಗೆ ವೇತನ ನೀಡುವುದು ವಿಳಂಬವಾಗುತ್ತಿದ್ದು, ನಿಗದಿತ ಸಮಯದೊಳಗೆ ವೇತನ ನೀಡಬೇಕೆಂದು ತಿಳಿಸಿದರು.
ನನ್ನ ಇಲಾಖೆ ವ್ಯಾಪ್ತಿಗೆ 46 ಸಾವಿರ ಸರ್ಕಾರಿ ಶಾಲೆಗಳು ಅನುದಾನಿತ ಸೇರಿ 59 ಸಾವಿರ ಶಾಲೆಗಳಿವೆ. 45 ಅತಿಥಿ ಶಿಕ್ಷಕರು, 56 ಲಕ್ಷ ಸರ್ಕಾರಿ ಶಾಲೆ ಮಕ್ಕಳಿದ್ದು ಉಚಿತವಾಗಿ ಬಟ್ಟೆ, ಪುಸ್ತಕ, ಊಟ ನೀಡಲಾಗುತ್ತಿದೆ. ಇಲಾಖೆಯಲ್ಲಿ ಅನೇಕ ಸಮಸ್ಯೆ ಇವೆ. 6 ತಿಂಗಳ ಅವಧಿಯಲ್ಲಿ 12500 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಅಜೀಂ ಪ್ರೇಮ್ ಜಿ ಫೌಂಡೇಷನ್ ನವರು ರೂ. 1500 ಕೋಟಿ ಎಸ್ಡಿಎಂಸಿ ಗೆ ನೀಡಿದ್ದು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಇನ್ನು ಮುಂದೆ ವಾರಕ್ಕೆ 6 ದಿನ ಮೊಟ್ಟೆ ನೀಡಲಾಗುವುದು. 1008 ಎಲ್ ಕೆಜಿ , ಯುಕೆಜಿ ಶಾಲೆ ಶುರು ಮಾಡಿದ್ದು 40 ಸಾವಿರ ಮಕ್ಕಳ ದಾಖಲಾತಿ ಈಗಾಗಲೆ ಆಗಿದೆ. 2500 ಕೋಟಿ ಸಿಎಸ್ ಆರ್ ನಿಧಿ ಸಂಗ್ರಹಿದ್ದೇವೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ರಾಜ್ಯದಾದ್ಯಂತ ಶಾಲೆಗಳ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಕುಲಸಚಿವ ಮಂಜುನಾಥ್ ಎ.ಎಲ್. ಪಿಪಿಟಿ ಮೂಲಕ ವಿಶ್ವವಿದ್ಯಾಲಯ ಹಣಕಾಸು, ಹುದ್ದೆಗಳ ವಿವರ, ಮೂಲಭೂತ ಸೌಕರ್ಯಗಳು, ಇತರೆ ಪ್ರಗತಿ ಕುರಿತು ಮಾಹಿತಿ ನೀಡಿದರು.
ಡಾ. ಸಂತೋಷ್ ಇವರು ಟಿಶ್ಯು ಕಲ್ಚರ್ ಬಾಳೆ ಗಿಡ ಉತ್ಪಾದನಾ ಘಟಕ ಕುರಿತು ಮಾಹಿತಿ ನೀಡಿದರು. ಭದ್ರಾವತಿ ನಗರಸಭಾ ಸದಸ್ಯ ಮೋಹನ್ ಕುಮಾರ್, ಮಾಜಿ ವಿಧಾನ ಪರಿಷತ್ ಶಾಸಕ ಪ್ರಸನ್ನ ಕುಮಾರ್, ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ ಎಸ್.ಎಂ.ಗೋಪಿನಾಥ್ ಇತರೆ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post