ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಪ್ಪು ಮಾಡಿರುವುದು ರಾಘವೇಂದ್ರ, #B Y Raghavendra ವಿಜಯೇಂದ್ರ. #B Y Vijayendra ನಾನೇಕೆ ಕ್ಷಮೆ ಕೇಳಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ #Ayanur Manjunath ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ #B S Yadiyurappa ಪುತ್ರರಾದ ಬಿ.ವೈ. ವಿಜಯೇಂದ್ರ ಹಾಗೂ ಬಿ.ವೈ. ರಾಘವೇಂದ್ರ ಅವರ ಹಗರಣಗಳ ಕುರಿತು, ಆಸ್ತಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೆ. ಆದರೆ, ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ನಾನೇನು ಮಾತನಾಡಿರಲಿಲ್ಲ. ಆದರೂ ಕೂಡ ಇತ್ತೀಚೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರುದ್ರೇಗೌಡರು ಪತ್ರಿಕಾಗೋಷ್ಠಿ ನಡೆಸಿ ನನ್ನ ಬಗ್ಗೆ ಮಾತನಾಡಿ ಯಡಿಯೂರಪ್ಪನವರ ಬಗ್ಗೆ ಮಾತನಾಡಿದ್ದೀರಿ. ಕ್ಷಮೆ ಕೇಳಬೇಕು ಎಂದಿರುವುದನ್ನು ನೋಡಿದರೆ ನಾನು ಮಾಡಿದ ಆರೋಪಗಳ ಬಗ್ಗೆ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ ಎಂದರು.
ಅಷ್ಟಕ್ಕೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ತೀರ್ಥಹಳ್ಳಿ ರಸ್ತೆಯಲ್ಲಿರುವ ಸುಮಾರು 5.36 ಎಕರೆ ಜಮೀನು ಎಲ್ಲಿಂದ ಬಂತು? ಅದನ್ನು ಯಾರು ತೆಗೆದುಕೊಂಡಿದ್ದರು. ಕೆಐಎಡಿಬಿಗೆ ಏಕೆ ವರ್ಗಾಯಿಸಿದರು. ಅವರದೇ ಜಮೀನನ್ನು ಕೆಐಎಡಿಬಿಗೆ ವರ್ಗಾಯಿಸಿ ಮತ್ತೆ ಅವರಿಂದಲೇ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ತಂತ್ರಗಾರಿಕೆಯನ್ನು ಮೆಚ್ಚಲೇಬೇಕು. ಬಹುಶಃ ಇದು ದೇಶದಲ್ಲೇ ಪ್ರಥಮವಿರಬಹುದು ಎಂದು ವ್ಯಂಗ್ಯವಾಡಿದರು.
Also read: ಚಿಕ್ಕಮಗಳೂರು | ಜಿಲ್ಲಾಸ್ಪತ್ರೆ ವೈದ್ಯರ ಎಳೆದಾಡಿ, ಚಪ್ಪಲಿಯಲ್ಲಿ ಎಸೆದ ಗಾಯಾಳು ಸಂಬಂಧಿ ತಸ್ಲಿಮಾ
ಹಾಗೆ ನೋಡಿದರೆ ಬಿ.ವೈ. ವಿಜಯೇಂದ್ರ ಅವರು ಈ ಜಮೀನನ್ನು ಸ್ಥಳೀಯ ರೈತನಿಂದ ಕೊಂಡುಕೊಂಡಿಲ್ಲ. ದೂರದ ಗದಗದ ಸಂಗಮೇಶ ಪರಪ್ಪ ಗದಗ ಎಂಬುವರಿಂದ ಕೊಂಡುಕೊಂಡಿದ್ದಾರೆ. ಇವರ್ಯಾರು ಎಂದು ನೋಡಿದಾಗ ಈ ಸಂಗಮೇಶ ಪರಪ್ಪ ಅವರು ಬಿ.ವೈ. ರಾಘವೇಂದ್ರ ಅವರ ಪತ್ನಿಯ ಸಹೋದರ ಎಂದು ತಿಳಿದು ಬರುತ್ತದೆ. ಮುಡಾ ಬಗ್ಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿಯ ಅಣ್ಣ ಎಂದು ಹೇಳುವ ಇವರು ಈಗ ಇದೇ ಘಟನೆಗೆ ಸಂಬಂಧಿಸಿದಂತೆ ಮಾತನಾಡುತ್ತಾರೆ ಎಂದರು.
ಸಂಗಮೇಶ ಪರಪ್ಪ ಅವರಿಂದ ಕೊಂಡುಕೊಂಡ ಜಮೀನನ್ನು ಕೆಐಎಡಿಬಿಗೆ ವರ್ಗಾಯಿಸಿ ನಂತರ ಅವರಿಂದ ಮತ್ತೆ ಇವರೇ ಪಡೆದುಕೊಳ್ಳುತ್ತಾರೆ ಎಂದರೆ ಇದು ಹಗರಣವಲ್ಲದೇ ಮತ್ತೇನೂ ಅಲ್ಲ. ಈ ವಿಷಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿಯ ಮಹಾನುಭಾವರು ನನ್ನನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿ ತಪ್ಪನ್ನೇ ಮರೆಸುತ್ತಿದ್ದಾರೆ. ಬಿ.ವೈ. ರಾಘವೇಂದ್ರ ಮತ್ತು ಬಿ.ವೈ. ವಿಜಯೇಂದ್ರ ಅವರ ಈ ಹೊಸ ಸೂತ್ರದ ರಹಸ್ಯ ಬಯಲಾಗಬೇಕಾಗಿದೆ ಎಂದರು.
ಈ ಇಬ್ಬರು ಸಹೋದರರ ಆಸ್ತಿಗಳು ಎಲ್ಲೆಲ್ಲಿವೆ ಎಂದು ಗೊತ್ತಾಗುತ್ತಿದೆ. ಬಸವಾಪುರದಲ್ಲಿ 380 ಎಕರೆಯನ್ನು ಯಾರು ತೆಗೆದುಕೊಂಡರು. ಭದ್ರಾವತಿಯ ಜಂಕ್ಷನ್ ಬಳಿ ಇರುವ ಸುಮಾರು 70 ಎಕರೆ ಜಮೀನು ಯಾವ ಟ್ರಸ್ಟ್ ಹೆಸರಿನಲ್ಲಿದೆ. ಶಿಕಾರಿಪುರದಲ್ಲಿ ಅದೆಷ್ಟು ಆಸ್ತಿಗಳಿವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಬೇನಾಮಿ ಹೆಸರಿನಲ್ಲಿ ಬಹು ಕೋಟಿ ಬೆಲೆಬಾಳುವ ಎಷ್ಟು ಆಸ್ತಿಗಳಿವೆ. ಅವರು ನಿಜಕ್ಕೂ ಬಹುದೊಡ್ಡ ರಾಜವಂಶಕ್ಕೆ ಸೇರಿದವರು. ನಾನೋ ಸಾಮಾನ್ಯ ಮನುಷ್ಯ. ನನ್ನ ಆರೋಪವನ್ನು ರುದ್ರೇಗೌಡರು ಮತ್ತು ಈ ಹಾಲಪ್ಪನವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದರು.
ಹರತಾಳು ಹಾಲಪ್ಪ ಅವರಾಗಲಿ, ರುದ್ರೇಗೌಡರಾಗಲಿ ಬಿ.ಎಸ್. ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದು ಇದೇ ಮೊದಲಿರಬೇಕು. ರಾಘವೇಂದ್ರ ಅವರನ್ನು ಸಂಸದರನ್ನಾಗಿ ಮಾಡುವ ಸಂದರ್ಭದಲ್ಲಿ ಇದೇ ಯಡಿಯೂರಪ್ಪನವರು ರುದ್ರೇಗೌಡರಿಗೆ ಸೀಟು ಕೊಡುವ ಭರವಸೆ ನೀಡಿ ಸಿಹಿಯನ್ನೂ ಹಂಚಿದ್ದರು. ಮಗನಿಗೆ ಟಿಕೆಟ್ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಆದರೆ ಆಗಿದ್ದೇನು? ಬಹುಶಃ ಇದೆಲ್ಲ ರುದ್ರೇಗೌಡರಿಗೆ ಅರ್ಥವಾಗಬೇಕು ಎಂದರು.
ಕಾಲ ಮಿಂಚಿಲ್ಲ, ಈಗಲೂ ಯಡಿಯೂರಪ್ಪನವರ ಬಗ್ಗೆ ನನಗೆ ಗೌರವವಿದೆ. ಅವರು ನನ್ನ ಬೆಳವಣಿಗೆಯಲ್ಲಿದ್ದಾರೆ. ಆದರೆ ಬೇರು ಮಾತ್ರ ನಾನೇ. ಈಗಲಾದರೂ ಕೆಐಎಡಿಬಿಯಿಂದ ಪಡೆದ ಜಮೀನು ಅವರ ಬೇನಾಮಿ ಹೆಸರಿನಲ್ಲಿರುವ ಆಸ್ತಿ, ಟೋಲ್ ಗೇಟ್ ವಿಷಯ ಮತ್ತು ಮುಖ್ಯವಾಗಿ ಪತ್ರಕರ್ತರ ಹೆಸರಿನಲ್ಲಿ ನಕಲಿ ಪತ್ರಕರ್ತರನ್ನು ಸೃಷ್ಠಿಸಿ ನಿವೇಶನ ಪಡೆದು ಅವುಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡ ಬಗ್ಗೆಯೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ಎಸ್.ಟಿ. ಹಾಲಪ್ಪ, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ಎಸ್.ಕೆ. ಮರಿಯಪ್ಪ, ಧೀರರಾಜ್, ಯು. ಶಿವಾನಂದ್, ರಾಘವೇಂದ್ರ, ಶಿ.ಜು. ಪಾಶಾ, ನಾಗರಾಜ್, ಹನುಮಂತು, ಲೋಕೇಶ್, ಲಕ್ಷ್ಮಣ್ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post