ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಕ್ಷಿಣಕಾಶೀ ಎಂದೇ ಪ್ರಸಿದ್ಧವಾದ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ 800 ವರ್ಷಗಳ ಇತಿಹಾಸವಿರುವ ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀ ದೇವಾಲಯ #Shri Kshetra Dharmasthal Manjunathaswamy Temple ಹಾಗೂ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ #Veerendra Heggade ಮತ್ತು ಅವರ ಕುಟುಂಬಸ್ಥರ ಹೆಸರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆ ಉಪಯೋಗಿಸಿ, ವೀಡಿಯೋ ತುಣುಕುಗಳನ್ನು ಸಾಮಾಜಿಜ ಜಾಲತಾಣಗಳಲ್ಲಿ ಹರಿಯಬಿಟ್ಟು ಸುಳ್ಳುಸುದ್ದಿ ಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಇಂದು ಗೋಪಿವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸೊಪ್ಪುಗುಡ್ಡೆ ರಾಘವೇಂದ್ರ ಇಂದಿನ ಹೋರಾಟ ಬರೀ ಶ್ಯಾಂಪಲ್ ಅಷ್ಟೇ. ರಾಜ್ಯಾದ್ಯಂತ ಒಂದು ಕೋಟಿಗೂ ಹೆಚ್ಚುಜನ ಸೇರಿ ಪ್ರತೀ ತಾಲ್ಲೂಕಿನಲ್ಲೂ ಅಪಪ್ರಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಹಿಂದೂಗಳು ತಿರುಗಿನಿಂತರೆ ಪರಿಣಾಮ ಬೇರೆಯೇ ಆಗುತ್ತದೆ. ಧರ್ಮಸ್ಥಳವನ್ನು ಉಳಿಸಿಕೊಳ್ಳುವುದು ನಮಗೆ ಗೊತ್ತಿದೆ. 10 ಸಾವಿರಕ್ಕೂ ಹೆಚ್ಚು ಹಿಂದೂ ದೇವಾಲಯಗಳನ್ನು ಮತ್ತು ಕೆರೆಗಳನ್ನು ಧರ್ಮಸ್ಥಳದ ಮೂಲಕ ಜೀರ್ಣೋದ್ಧಾರ ಮಾಡಲಾಗಿದೆ. ಆಗ ಜೈನರು ಎಂದು ಯಾರೂ ಕೇಳಿಲ್ಲ. ಈಗ ಹಿಂದೂ ಮತ್ತು ಜೈನ್ ಎಂದು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾವನೋ ಒಬ್ಬ ಅನಾಮಿಕ ಡಿಸಿ ಕಛೇರಿಯ ಕೆಳಗೆ ನಾಲ್ಕು ಹೆಣ ಹೂತಿದ್ದೇನೆ ಎಂದರೆ ನಾಳೆ ಸರ್ಕಾರ ಅದನ್ನು ಅಗೆಯಲು ಸಿದ್ದವಿದೆಯೇ ಎಂದು ಪ್ರಶ್ನಿಸಿದರು.
ಖಾವಂದರ ಬಗ್ಗೆ ಮಾತನಾಡಿದರೆ ಸಹಿಸುವ ಪ್ರಶ್ನೆಯಿಲ್ಲ. ಶನಿವಾರ ತೀರ್ಥಹಳ್ಳಿಯಿಂದ ಹೋರಾಟ ಪ್ರಾರಂಭಿಸುತ್ತೇವೆ. ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲೂ ಕನಿಷ್ಠ 10 ಸಾವಿರ ಜನರನ್ನು ಸೇರಿಸಿ ಅಪಪ್ರಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಎಲ್ಲಾ ಹಿಂದೂ ನಾಯಕರು ಮಠಾಧೀಶರು ಈ ಬಗ್ಗೆ ಧ್ವನಿಎತ್ತಬೇಕು ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಮಾತನಾಡಿ, ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯವರ ಬಗ್ಗೆ ಅವಮಾನ ಮಾಡಿದರೆ ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ ಎಂದು ಈಗಾಗಲೇ ತೀರ್ಮಾನ ಮಾಡಿಯಾಗಿದೆ. ಯಾವುದೇ ಸೂಚನೆ ನೀಡದೆ ಇಷ್ಟು ಜನ ಹಿಂದೂಗಳು ಸೇರಿದ್ದೀರಿ. ಮೊದಲು ಅನಾಮಿಕನನ್ನು ಅರೆಸ್ಟ್‍ಮಾಡಿ. ಆತ ದಿನಕ್ಕೊಂದು ಜಾಗ ತೋರಿಸುತ್ತಿದ್ದಾನೆ. ನಾಳೆ ಸಿಎಂ ಮನೆ ತೋರಿಸಿದರೆ ಅದನ್ನು ಒಡೆದುಹಾಕುತ್ತೀರಾ ಎಂದು ಪ್ರಶ್ನಿಸಿದರು.
ಧರ್ಮಸ್ಥಳ ಭಕ್ತರು ಜಾಗೃತರಾಗಿದ್ದಾರೆ. ಸುಮ್ಮನೆ ಕೂತಿಲ್ಲ. ಎಲ್ಲರೂ ಎದ್ದರೆ ಈ ಸರ್ಕಾರ ಇರಲ್ಲ. ಅನಾಮಿಕ ಯಾರು ? ಎಸ್‍ಐಟಿ ಅಧಿಕಾರಿಗಳ ಪ್ರವೇಶವನ್ನು ಹಿಂದೂಗಳು ತಡೆದರೆ ಅದನ್ನು ಅಸ್ತ್ರವಾಗಿಟ್ಟುಕೊಂಡು ಗಲಭೆ ಎಬ್ಬಿಸುವ ಭ್ರಮೆಯಲ್ಲಿ ಕೆಲವರಿದ್ದಾರೆ. ಎಸ್‍ಐಟಿ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ. ಅವರು ಶಾಂತವಾಗಿ ಅನಾಮಿಕ ಹೇಳಿದ ಕಡೆಯಲೆಲ್ಲಾ ಅಗೆದು ತನಿಖೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದೆಲ್ಲೆಡೆ ಹಿಂದೂ ಸಮಾಜ ಒಂದು ರೀತಿಯಲ್ಲಿ ಒಟ್ಟಾಗಲು ಸಹಕಾರ ಕೊಡುತ್ತಿದ್ದಾನೆ ಅದಕ್ಕಾಗಿ ಅನಾಮಿಕನಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹೆಗ್ಗಡೆಯವರು 25 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಸ್ವ-ಉದ್ಯೋಗ ಕಲ್ಪಿಸಿದರು, ನೂರಾರು ಕೆರೆಗಳನ್ನು ಜೀರ್ಣೋದ್ಧಾರ ಮಾಡಿದರು, ಕುಡಿತದ ಚಟವನ್ನು ಬಿಡಿಸಿದರು, ಮತಾಂತರ ನಿಲ್ಲಿಸಿದರು, ಅವರ ವಿರುದ್ಧ ಕೆಲವು ಎಡಪಂಥೀಯರು ಮತ್ತು ಹಿಂದೂ ವಿರೋಧಿಗಳು ಒಗ್ಗಟ್ಟಾಗಿ ಷಡ್ಯಂತ್ರ ಮಾಡಿದರೆ ಹಿಂದೂ ಸಮಾಜ ತಕ್ಕಪಾಠ ಕಲಿಸುತ್ತದೆ ಎಂದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಯಾರಿಗೂ ಅನ್ಯಾಯಮಾಡದ ಎಲ್ಲರಿಗೂ ಒಳಿತನ್ನು ಬಯಸುವ ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಅನಾಮಿಕನ ಹೆಸರಿನಲ್ಲಿ ಮಾನಸಿಕ ತೊಂದರೆಯನ್ನು ಕೊಡುತ್ತಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಎಲ್ಲಾ ದುಷ್ಟಶಕ್ತಿಗಳಿಗೂ ತಕ್ಕ ಉತ್ತರ ಹಿಂದೂಗಳು ನೀಡುತ್ತಾರೆ ಎಂದರು.
ಎಸ್. ದತ್ತಾತ್ರಿ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿ ರಚನೆ ಮಾಡಿದ್ದು, ಧಾರ್ಮಿಕ ಕೇಂದ್ರಗಳ ಶಕ್ತಿ ಕುಗ್ಗಿಸುವ ಕೆಲಸ ಎಲ್ಲಿ ನಡೆಯುತ್ತಿದೆಯೋ ಅಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಂಡು, ಹಿಂದೂ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆ ಮಾಡಲು ಪ್ರಾರಂಭಿಸಿದೆ ಎಂದರು.
ಎಡಪಂಥೀಯರ ಮಾತು ಕೇಳಿ ಧರ್ಮಸ್ಥಳದ ಶಕ್ತಿ ಕುಂದಿಸುವ ಯಾವುದೇ ಪ್ರಯತ್ನ ಫಲಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ಮೋಹನ್‍ಶೆಟ್ಟಿ ನಿಟ್ಟೂರು, ಜಯರಾಜ್ ಬಿ. ಪಾಂಡೆ, ಧನಕೀರ್ತಿ, ಯಶೋಧರ ಹೆಗ್ಗಡೆ, ವಿಜಯ್ ಕುಮಾರ್ ದಿನಕರ್, ಶಾಂತಾ ಸುರೇಂದ್ರ, ರಶ್ಮೀಶ್ರೀನಿವಾಸ್, ಸುರೇಖಾ ಮುರಳೀಧರ್, ಬಳ್ಳೆಕೆರೆ ಸಂತೋಷ್, ದಿವಾಕರ್ ಶೆಟ್ಟಿ, ಜಗದೀಶ್ ಸೇರಿದಂತೆ ಶ್ರೀ ಹೊಂಬಜ ಜೈನ ಮಠದ ಭಕ್ತಾಧಿಗಳು, ಜೈನ್ ಮಿಲನ್ ಶಿವಮೊಗ್ಗ ಸಂಸ್ಥೆಯ ಪದಾಧಿಕಾರಿಗಳು, ದಿಗಂಬರ ಜೈನ ಸಂಘ ಶಿವಮೊಗ್ಗ ಮತ್ತು ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post