ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ದಿಢೀರ್ ಕರಡಿಯೊಂದು ಪ್ರತ್ಯಕ್ಷವಾಗಿ #Bear spotted at Shivamogga airport ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಸೋಗಾನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿನಾಯಕ ನಗರದಲ್ಲಿ ಕಾಣಿಸಿಕೊಂಡ ಕರಡಿ ಬಳಿಕ ವಿಮಾನ ನಿಲ್ದಾಣದೊಳಗೆ ಪ್ರವೇಶ ಮಾಡಿದೆ. ತಕ್ಷಣ ಅರಣ್ಯ ಇಲಾಖೆಗೆ #Forest Department ಸಂದೇಶ ತಲುಪಿದ್ದು, ಉಂಬ್ಳೆಬೈಲು ಅರಣ್ಯ ವಿಭಾಗದ ಅಧಿಕಾರಿಗಳು ಅಲರ್ಟ್ ಆಗಿ ಸುಮಾರು 20 ಜನರ ತಂಡದೊಂದಿಗೆ ಕರಡಿ ಹಿಡಿಯುವ ಕಾರ್ಯಾಚರಣೆ ನಡೆಸಿ ಕರಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಕರಡಿಯು ವಿಮಾನ ನಿಲ್ದಾಣದ ತಡೆಗೋಡೆ ಹಾರಿ ಜ್ಯೋತಿನಗರಕ್ಕೆ ಬಂದು ದೊಡ್ಡಬೀಳು ಗ್ರಾಮಕ್ಕೆ ಹೋಗಿ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದಿದೆ. ನಂತರ ಜ್ಯೋತಿನಗರದ ಶಾಲಾ ಆವರಣ ಹಾಗೂ ಅಂಗನವಾಡಿ ಬಳಿ ಕಾಣಿಸಿಕೊಂಡಾಗ, ನಾಗರೀಕರು ಭಯಭೀತರಾಗಿದ್ದರು. ಬಳಿಕ ಹರಸಾಹಸಪಟ್ಟು ಅರಣ್ಯ ಸಿಬ್ಬಂದಿಗಳು ಜ್ಯೋತಿನಗರದ ಅಂಗನವಾಡಿ ಬಳಿ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಅದನ್ನು ಸೆರೆಹಿಡಿದು ವೈದ್ಯಕೀಯ ಚಿಕಿತ್ಸೆ ನೀಡಿ ಪುನರ್ವಸತಿ ವಿಭಾಗಕ್ಕೆ ಕಳುಹಿಸಿದ್ದು ವೈದ್ಯರ ಕಣ್ಗಾವಲಿನಲ್ಲಿದೆ.
ಕರಡಿ ಸೆರೆಯ ಬಳಿಕ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದು ಹೆಚ್ಚಿನ ಅನಾಹುತ ತಪ್ಪಿದೆ. ಸುಮಾರು 11:30ರ ವರೆಗೆ ಈ ಕಾರ್ಯಾಚರಣೆ ನಡೆಯಿತು. ಈ ಕರಡಿಗೆ ಜಿಪಿಎಸ್ ಅಳವಡಿಸಲಾಗಿತ್ತು ಎನ್ನಲಾಗಿದೆ.
ಉಂಬ್ಳೆಬೈಲು ಅರಣ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ತುಂಗಾನಗರ ಪೊಲೀಸರು ಈ ಸಂದರ್ಭದಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















