Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಏಕರೂಪ ವ್ಯವಸ್ಥೆಯ ಕಾಮನ್ ಬೈಲಾ ಜಾರಿ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕ ಅಭಿನಂದನೆ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಕರ್ನಾಟಕದ ವೈದ್ಯಕೀಯ ಶಿಕ್ಷಣ ಇಲಾಖೆಯ ಮಹತ್ವದ ತಿರ್ಮಾನದ ಪರಿಣಾಮವಾಗಿ ರಾಜ್ಯದ ಎಲ್ಲ ಸ್ವಾಯತ್ತ ಸರ್ಕಾರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಡಳಿತ ಹಾಗೂ ನಿರ್ವಹಣೆಯಲ್ಲಿ ಏಕರೂಪ ವ್ಯವಸ್ಥೆ ತರುವ ನಿಟ್ಟಿನಲ್ಲಿ “ಕಾಮನ್ ಬೈಲಾ” ಅಳವಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳ ವಿಶೇಷ ಆಡಳಿತ ಮಂಡಳಿಯ ಸಭೆಯಲ್ಲಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಈ ಕ್ರಮದಿಂದ ವೈದ್ಯಕೀಯ ಕಾಲೇಜುಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆ, ಪಾರದರ್ಶಕತೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಪ್ರತಿ ಕಾಲೇಜು ಕೂಡ ಸ್ವತಂತ್ರ ಬೈಲಾ ಹೊಂದಿದ್ದವು ಹಾಗೂ ಕಾಲೇಜುಗಳ ಆಡಳಿತದ ರೀತಿ ನೀತಿಗಳು ಪ್ರತ್ಯೇಕವಾಗಿದ್ದವು. ಸಾಮಾನ್ಯ ಬೈಲಾ ಅಳವಡಿಕೆಯ ನಿರ್ಧಾರದಿಂದ ಕಾಲೇಜುಗಳ ನಡುವೆ ಸಮನ್ವಯ ಸಾಧಿಸಲು ಅನುಕೂಲವಾಗಲಿದೆ. ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ 24 ವೈದ್ಯಕೀಯ ಕಾಲೇಜುಗಳು ಹಾಗೂ 8 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಾಮಾನ್ಯ ಬೈಲಾದಡಿ ತರಲು ಎರಡು ವರ್ಷಗಳ ಕಾಲ ವೈದ್ಯಕೀಯ ಮತ್ತು ಆಡಳಿತ ಕ್ಷೇತ್ರದ ತಜ್ಞರೊಂದಿಗೆ ವ್ಯಾಪಕವಾದ ಚರ್ಚೆಗಳನ್ನು ನಡೆಸಲಾಗಿತ್ತು. ಅಂತಿಮವಾಗಿ ಕರಡು ಬೈಲಾಗಳನ್ನು ಪ್ರಕಟಿಸಿ, ಆಕ್ಷೇಪಣೆಗಳಿಗೆ ಅವಕಾಶ ನೀಡಿ, ಅಂತಿಮ ಬೈಲಾವನ್ನು ಸರ್ಕಾರ ಅಂಗೀಕರಿಸಿದೆ ಎಂದು ತಿಳಿಸಿದ್ದಾರೆ.
ಇದರ ಪರಿಣಾಮವಾಗಿ ಈ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಪದೋನ್ನತಿ, ಕಾರ್ಯನಿರ್ವಾಹಣ ವರದಿ ಇನ್ನಿತರ ವಿಚಾರಗಳಲ್ಲಿ ಸಿಬ್ಬಂದಿಗಳ ಗೊಂದಲಗಳಿಗೆ ತೆರೆಬಿದ್ದಿದ್ದು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದ್ಧಿಗಳು, ನೆಮ್ಮದಿಯಿಂದ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದಂತಾಗಿದೆ ಎಂದಿದ್ದಾರೆ.
ಈ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್‌ರವರಿಗೆ ಅಭಿನಂದನೆ ಸಲ್ಲಿಸುವುದಾಗಿ ಎಸ್. ದತ್ತಾತ್ರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post