Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜಕೀಯ ಚಟಕ್ಕಾಗಿ ಉಚಿತ ಯೋಜನೆ ಕಾಂಗ್ರೆಸ್ ಘೋಷಣೆ ಮಾಡಿತ್ತು. ಯೋಜನೆ ಜಾರಿ ಮಾಡಲು ಮೀನಮೇಷ ಎಣಿಸುತ್ತಿದೆ. ಹಿಂದಿನ ಸರ್ಕಾರದ ಯಾವುದೇ ಯೋಜನೆ ನಿಲ್ಲಿಸಬಾರದು. ಗ್ರಾಹಕರ ಮೇಲೆ ಹೊಸ ಹೊರೆ ಹೊರಿಸಬಾರದು ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ ಇಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ವತಿಯಿಂದ ಇಂದು ಬೆಳಗ್ಗೆ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದ ಜನತೆ ಬುದ್ಧಿವಂತರಿದ್ದಾರೆ. ವಿದ್ಯುತ್ ಉಚಿತ ಎಂದು ಹೇಳಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಷಡ್ಯಂತ್ರದ ಮೂಲಕ ಉಚಿತವಾಗಿ ಕೊಟ್ಟ ಹಾಗೆ ಮಾಡಿ ಗ್ರಾಹಕರ ಮೇಲೆ ಬರೆ ಎಳೆದಿದೆ ಎಂದರು.
ಯುವ ಜನತೆಗೆ ಮೂರು ಸಾವಿರ ರೂ. ನಿರುದ್ಯೋಗ ಭತ್ಯೆ ಎಂದು ಘೋಷಿಸಿ ಈಗ 2022 -23 ನೇ ಸಾಲಿನವರಿಗೆ ಮಾತ್ರ ಎಂದು ಕಂಡೀಷನ್ ವಿಧಿಸುತ್ತಿದೆ. ಇದರಿಂದ ಲಕ್ಷಾಂತರ ಯುವಕರಿಗೆ ನಿರಾಸೆಯಾಗಿದೆ. ಈ ಸರ್ಕಾರ ತುಂಬಾ ದಿನ ಉಳಿಯಲ್ಲ. ಜನ ಬೀದಿಗಿಳಿಯುತ್ತಾರೆ. ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.ಜೂನ್ 18 ರಂದು ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಪಿಇಎಸ್ ಪ್ರೇರಣಾ ಸಭಾಂಗಣದಲ್ಲಿ ಸಭೆ ಸೇರಿ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಚರ್ಚಿಸಿ ಹೋರಾಟದ ರೂಪರೇಷೆಗಳನ್ನು ರೂಪಿಸಲಿದ್ದಾರೆ. ಎಲ್ಲಾ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಈ ಸರ್ಕಾರ ವಚನಭ್ರಷ್ಟ ಸರ್ಕಾರ. ಈ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಮಾಡಲಿದೆ. ಒಂದನೇ ತಾರೀಖಿಗೆ ಜಾರಿ ಎಂದವರು ಈಗ ಆಗಸ್ಟ್ 15 ಕ್ಕೆ ಎಂದು ಹೇಳುತ್ತಿದ್ದಾರೆ. 10 ಕೆಜಿ ಅಕ್ಕಿ ನನಗೂ ಫ್ರೀ, ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದವರು ಈಗ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಗೂಬೆ ಕೂರಿಸುತ್ತಿದ್ದಾರೆ. ಯೋಜನೆ ಘೋಷಣೆ ಮಾಡುವ ಮೊದಲು ಇವರು ಕೇಂದ್ರದೊಂದಿಗೆ ಚರ್ಚೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಎಲ್ಲಾ ಉಚಿತ ಎಂದು ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸಹಿ ಹಾಕಿದ ಗ್ಯಾರಂಟಿ ಕಾರ್ಡ್ ಕೊಟ್ಟು ಈಗ ಜನರನ್ನು ವಂಚಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕ್ ನಾಯ್ಕ್, ಪ್ರಮುಖರಾದ ರತ್ನಾಕರ್ ಶೆಣೈ, ಟಿ.ಬಿ. ಜಗದೀಶ್, ಪದ್ಮಿನಿ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post