ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಸ್ತಕವನ್ನು ಬೆಳಗುವ ಪುಸ್ತಕಗಳು ಮತ್ತು ದಿನಪತ್ರಿಕೆಗಳ ಅಧ್ಯಯನದಲ್ಲಿ ಯುವ ಸಮೂಹ ಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.
ನಗರದ ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ವತಿಯಿಂದ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘ, ಕ್ರೀಡಾ ವೇದಿಕೆ, ಭಾರತ ಸೇವಾದಳ, ಎನ್.ಎಸ್.ಎಸ್ ಘಟಕ, ರೋವ಼ರ್ ರೇಂಜರ್ಸ್, ರೆಡ್ ಕ್ರಾಸ್ ಕ್ಲಬ್‌ಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅರ್ಹತೆಯಿಂದ ಒಳ್ಳೆಯ ಅವಕಾಶ, ಯೋಗ್ಯತೆಯಿಂದ ಮರ್ಯಾದೆ ಸಿಗುತ್ತದೆ. ಅಂತಹ ಅರ್ಹತೆ ಮತ್ತು ಯೋಗ್ಯತೆ ನಿಮ್ಮದಾಗಲಿ. ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಸ್ತು ಅಮ್ಮನ ಮಡಿಲು ಮತ್ತು ಅಪ್ಪನ ಹೆಗಲು. ತಂದೆ ತಾಯಿ ಹಿರಿಯರ ಆಶಯಗಳನ್ನು ಗೌರವಿಸಿ. ಅಪ್ಪ ಅಮ್ಮ ಇಲ್ಲದವರು ಅನಾಥರಲ್ಲ, ಅವರ ನಿಜವಾದ ಬೆಲೆ ಗೊತ್ತಿಲ್ಲದವರು ಅನಾಥರು.

ಅದೃಷ್ಟದಿಂದ ಬಂದಿದ್ದು ಅಹಂಕಾರ ನೀಡಿದರೆ, ಕಷ್ಟಪಟ್ಟು ಸಂಪಾದಿಸಿದ್ದು ಆತ್ಮ ತೃಪ್ತಿ ನೀಡುತ್ತದೆ. ಪ್ರತಿಭೆ ಮತ್ತು ರೂಪ ದೇವರ ಕೊಡುಗೆ, ಕೀರ್ತಿ ಮನುಷ್ಯನ ಸೃಷ್ಟಿ, ಅದರೆ ವ್ಯಕ್ತಿತ್ವ ಮತ್ತು ಅಹಂಕಾರ ನಮ್ಮ ಸೃಷ್ಟಿ. ಏನು ಹೇಳುತ್ತೇವೆ ಎನ್ನುವುದು ಮುಖ್ಯವಲ್ಲ, ಹೇಗೆ ಹೇಳುತ್ತೇವೆ ಎಂಬುದು ಮುಖ್ಯ. ದೃಷ್ಟಿ ಚೆನ್ನಾಗಿದ್ದರೆ ಸೃಷ್ಟಿ ಚೆನ್ನಾಗಿರುತ್ತದೆ. ಈ ಹಿನ್ನಲೆಯಲ್ಲಿ ಸಮಾಜಮುಖಿ ದೃಷ್ಟಿಕೋನ ನಿಮ್ಮದಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಅಂಜನಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ.ಬಿ.ಪಿ, ಎನ್ಇಎಸ್ ನಿರ್ದೇಶಕ ಹೆಚ್.ಸಿ.ಶಿವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 572 ಅಂಕ ಪಡೆದ ವಿದ್ಯಾರ್ಥಿ ಸಮರ್ಥ.ಈ.ಜಿ ಅವರನ್ನು ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post