ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ಕ್ರೀಡಾನಗರವಾಗಿ ಬೆಳೆಯುತ್ತಿದೆ. ಅದಕ್ಕೆ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ MP Raghavendra ಹೇಳಿದರು.
ಅವರು ಸಹ್ಯಾದ್ರಿ ಕಲಾ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ’35ನೇ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ 2022-23ದಲ್ಲಿ ಸಂಸದ ಬಿ. ವೈ ರಾಘವೇಂದ್ರ ಅವರು ಭಾಗವಹಿಸಿ ವಿಜೇತ ಕ್ರೀಡಾ ಪಟುಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಶಿವಮೊಗ್ಗ ನಗರ ಮತ್ತು ಗ್ರಾಮೀಣ ಭಾಗದ ಯುವಜನರು ಅಗತ್ಯ ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಸುಸಜ್ಜಿತವಾದ ಕ್ರೀಡಾ ಸಮುಚ್ಚಯವು ಕೃಷಿ ಕಾಲೇಜಿನ ಆವರಣದಲ್ಲಿ 100 ಕೋಟಿ ವೆಚ್ಚದಲ್ಲಿ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಹಾಗೆಯೇ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಇಂಡೋರ್ ಸ್ಟೇಡಿಯಂ ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಫಿಟ್ ಇಂಡಿಯಾಕ್ಕೆ ನಮ್ಮ ಯುವ ಸಮುದಾಯವನ್ನು ಸಿದ್ಧಗೊಳಿಸಲು ಇಂತಹ ಕ್ರೀಡಾ ಯೋಜನೆಗಳು ಅಗತ್ಯವಾಗಿ ಬೇಕಾಗಿದೆ ಎಂದರು.
Also read: ಸಾರಿಗೆ ಬಸ್-ಕಾರು ಮುಖಾಮುಖಿ ಢಿಕ್ಕಿ: ಇಬ್ಬರು ಸಾವು, ನಾಲ್ವರಿಗೆ ಗಾಯ
ಸದೃಢ ಆರೋಗ್ಯವಂತ ಯುವ ಸಮುದಾಯವನ್ನು ನಿರ್ಮಿಸುವುದು ನಮ್ಮೆಲ್ಲರ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರವು ಮುಂಬರುವ ದಿನಗಳಲ್ಲಿ ನಮ್ಮೆಲ್ಲ ಕ್ರೀಡಾ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಸಜ್ಜಾಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಶಿವಮೊಗ್ಗ ನಗರದ ಘನತೆಯ ಇತಿಹಾಸ ಪ್ರಸಿದ್ಧ ಸಹ್ಯಾದ್ರಿ ಕಾಲೇಜಿನ ಶೈಕ್ಷಣಿಕ ಅಗತ್ಯಗಳಿಗೆ ಪೂರ್ಣ ಗಮನ ನೀಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯನ್ ಒಲಂಪಿಕ್ಸ್ ಮೊದಲ ಮಹಿಳಾ ಅಧ್ಯಕ್ಷರಾಗಿ ಚಿನ್ನದ ರಾಣಿ ಪಿ ಟಿ ಉಷಾ ಅವರನ್ನು ಆಯ್ಕೆ ಮಾಡಿದ್ದಾರೆ. ಈ ವರ್ಷ 124 ಕ್ರೀಡಾಪಟುಗಳು ಒಲಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, 2036ರಲ್ಲಿ ಭಾರತ ದೇಶ ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜನೆ ಮಾಡಲಿರುವುದು ದೇಶದ ಸ್ಪರ್ಧಾರ್ತಿಗಳಿಗೆ ಸ್ಫೂರ್ತಿಯಾಗಲಿದೆ ಎಂದರು.
ಸಭೆಯಲ್ಲಿ ಸಂತೋಷ್ ಬಳ್ಳೇಕೆರೆ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಎನ್., ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಎಂ., ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಎನ್.ಡಿ, ವಿರೂಪಾಕ್ಷ, ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಧನಂಜಯ ಕೆ.ಬಿ., ಕ್ರೀಡಾ ಸಂಚಾಲಕರಾದ ಡಾ ಶಿವಮೂರ್ತಿ ಎ., ಗಿರೀಶ್ ಕಾರಂತ ಶುಭಾ ಮರವಂತೆ, ಎಸ್. ಕುಮಾರ್ ಮುಂತಾದವರು ಉಪಸ್ಥಿತರಿದ್ದರು.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















