ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೆ ಬರಲಿದೆ. ರಾಜ್ಯದ ಜನತೆ ಸಂಕಲ್ಪ ಮಾಡಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಸಮೀಪದ ಆಯನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ನನ್ನ ಮೇಲೆ ಪ್ರೀತಿ ಹೊಂದಿದ್ದಾರೆ. ಅವರ ತೋರುತ್ತಿರುವ ಪ್ರೀತಿ, ಗೌರವವನ್ನು ಎಂದಿಗೂ ಮರೆಯುವುದಿಲ್ಲ. ಕರ್ನಾಟಕದ ಜನತೆ ನನಗೆ ಪ್ರೀತಿ ತೋರಿದರೆ, ಆಶೀರ್ವಾದ ಮಾಡಿದರೆ ಕರ್ನಾಟಕವನ್ನು ಮತ್ತಷ್ಟು ವಿಕಾಸ ಮಾಡುತ್ತೇನೆ. ಮತ್ತೆ ಕರ್ನಾಟಕಕ್ಕೆ ಬರುತ್ತೇನೆ ಎಂದು ಭರವಸೆ ನೀಡಿದರು.

ಈ ಬಾರಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಯಡಿಯೂರಪ್ಪ ಅವರು ಸಂಕಲ್ಪ ಮಾಡಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಜನರು ಕೂಡ ನಿರ್ಧಾರ ಮಾಡಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಲೆನಾಡಿನ ಕೃಷಿ ಇಡಿ ದೇಶಕ್ಕೆ ಮಾದರಿಯಾದದು. ಅಡಿಕೆ ಬೆಳೆಗಾರರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಅಡಿಕೆ ಆಮದು ಆಗುತ್ತಿರುವುದು ಕಾಂಗ್ರೆಸ್ ಸರಕಾರದ ನೀತಿಯಿಂದ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.

ಇಂದು ದಾಖಲೆ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳು ರಫ್ತು ಆಗುತ್ತಿದೆ. ಕೃಷಿ ಉತ್ಪನ್ನ ರಫ್ತಿ ನಲ್ಲಿ ಜಗತ್ತಿನ ಮೊಲದ ಹತ್ತರ ಪಟ್ಟಿಯಲ್ಲಿ ಭಾರತ ಸೇರ್ಪಡೆಗೊಂಡಿದೆ. ಫಸಲ್ ಭೀಮಾ ಯೋಜನೆ ಮೂಲಕ ದೇಶದಲ್ಲಿನ ರೈತರಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಕರ್ನಾಟಕದಲ್ಲಿನ ರೈತರಿಗೆ ಸುಮಾರು 10000 ಕೋಟಿ ರು. ನೇರವಾಗಿ ಅವರವರ ಖಾತೆಗೆ ಸಂದಾಯವಾಗಿದೆ ಎಂದರು.
ರಸಗೊಬ್ಬರಕ್ಕೆ ಸಬ್ಸಿಡಿ ಹೆಚ್ಚಳ ಮಾಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಕೃಷಿಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಕಾಂಗ್ರೆಸ್ ಅಧಿಕಾರ ಸಂದರ್ಭದಲ್ಲಿ ಅವರ ತಿಜೋರಿ ಭರ್ತಿಯಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ನಿವಾರಣೆ ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ರೈತರು ಬ್ಯಾಂಕಿಂಗ್ ನಿಂದ ದೂರವಿದ್ದರು. ಕೋಟ್ಯಂತರ ರು. ಹಣ ಬೇರೆಯವರ ಜೇಬು ಸೇರುತ್ತಿತ್ತು. ನಮ್ಮ ಸರ್ಕಾರದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಅನುಕೂಲ ಮಾಡಲಾಗಿದೆ. ಮುದ್ರಾ ಯೋಜನೆ ಮೂಲಕ ಸಾಲ ನೀಡಲಾಗುತ್ತಿದೆ. ಮೂರು ಸೇನೆಯಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ಅಕ್ಕಮಹಾದೇವಿ ಗತಿಶಕ್ತಿ ಯೋಜನೆ ಜಾರಿ ಮಾಡಲಾಗಿದೆ. ಹಲವು ಹೊಸ ವಿಶ್ವವಿದ್ಯಾಲಯಗಳು, ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಾಣವಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಿದ್ದೇವೆ. 9 ವರ್ಷ ಆಡಳಿತ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ಆದರೆ ಈ ಹಿಂದೆ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಸರ್ಕಾರ ಏನು ಮಾಡಿತ್ತು ಎಂದು ಪ್ರಶ್ನಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಬಗ್ಗೆ ಜನರು ಯೋಚಿಸಬೇಕಾದ ಅಗತ್ಯವಿದೆ. 85 ಪರ್ಸೆಂಟ್ ಕಮಿಷನ್ ಪಡೆಯುವ ಕಾಂಗ್ರೆಸ್ ನಿಂದ ಯುವ ಜನರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಕಾಂಗ್ರೆಸ್ ನವರು ವ್ಯವಸ್ಥಿತವಾಗಿ ಸುಳ್ಳನ್ನು ಹಬ್ಬಿಸುತ್ತಿದ್ದಾರೆ. ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದೆ. ಅವರ ಆಶ್ವಾಸನೆ ಕೇವಲ ಕಾಗದಕಷ್ಟೇ ಸೀಮಿತವಾಗುತ್ತದೆ. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಮತ್ತೊಮ್ಮೆ ರಿವರ್ಸ್ ಗೇರಿನಲ್ಲಿ ಹೋಗಬೇಕಾಗುತ್ತದೆ ಎಂದು ಟೀಕಿಸಿದರು.

ಶಿವಮೊಗ್ಗ ಆಟೋಮೊಬೈಲ್ ಉತ್ಪನ್ನದ ಹಬ್ ಆಗಿದೆ. ಇಲ್ಲಿ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಜಿಲ್ಲೆ ಮತ್ತು ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಬೇಕಿದೆ ಎಂದರು.
ಭಾರತ್ ಮಾತಾ ಕಿ ಜೈ, ಬಜರಂಗ್ ಬಲಿ ಕಿ ಜೈ ಎಂದೇ ತಮ್ಮ ಭಾಷಣವನ್ನು ಶುರು ಮಾಡಿದ ಪ್ರಧಾನಿ ಮೋದಿ ನೆರೆದಿದ್ದ ಜನರನ್ನು ಪುಳಕಿತಗೊಳಿಸಿದರು.
ಮಲೆನಾಡಿನ ಮಡಿಲು, ಸೌಂದರ್ಯದ ಹೊನಲು ಶಿವಮೊಗ್ಗದ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಕೆಲ ಶಬ್ದಗಳನ್ನು ತಮ್ಮ ಭಾಷಣದಲ್ಲಿ ಪ್ರಯೋಗಿಸಿದ ಮೋದಿ, ಕುವೆಂಪು ಹುಟ್ಟಿದ ನಾಡು, ಪೂಜ್ಯ ಶ್ರೀಧರ ಸ್ವಾಮೀಜಿ ಅವರಿಗೂ ಶ್ರದ್ದಾಪೂರ್ವಕ ನಮಸ್ಕಾರ ಸಲ್ಲಿಸುತ್ತೇನೆ ಎಂದು ಶ್ರೀಧರ ಸ್ವಾಮೀಜಿ ಅವರನ್ನು ಹಾಗೂ ಕುವೆಂಪು ಅವರನ್ನು ನೆನಪಿಸಿಕೊಂಡರು. ಗಂಗಾ ಸ್ನಾನ ತುಂಗಾಪಾನ, ಏಸೂರು ಬಿಟ್ಟರು ಈಸೂರು ಬಿಡೆವು ಎಂದು ನಾಣ್ನುಡಿ ಉಚ್ಚರಿಸುವುದರ ಮೂಲಕ ನೆರೆದಿದ್ದ ಜನರನ್ನು ಮಂತ್ರ ಮುಗ್ಧರನ್ನಾಗಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಜೆ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕನಿಷ್ಠ 120 ರಿಂದ 130ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದರ ಮೂಲಕ ಪ್ರಧಾನಿಯವರಿಗೆ ಗೆಲುವು ಉಡುಗೊರೆ ನೀಡಬೇಕಿದೆ. ಗೌರವ ಸಲ್ಲಿಸಬೇಕಿದೆ ಎಂದು ಹೇಳಿದರು.
ಮೋದಿಜೀ ಯವರ ಆಶೀರ್ವಾದದಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಡೆಯುತ್ತಿದೆ. ಶಿವಮೊಗ್ಗವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಕೆಲಸ ಈಗಾಗಲೇ ಮಾಡಿದ್ದೇವೆ. ಹುಟ್ಟು ಹಬ್ಬದ ದಿನದಂದೇ ವಿಮಾನ ಶಿವಮೊಗ್ಗ ನಿಲ್ದಾಣದ ಉದ್ಘಾಟನೆ ನೆರವೇರಿಸಿದ್ದಾರೆ. ಅಂದು ಲಕ್ಷಾಂತರ ಮಂದಿಯಿಂದ ನನಗೆ ಆಶೀರ್ವಾದ ದೊರಕಿದೆ. ಅದೇ ರೀತಿ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಬೇಕು. ಬಿಜೆಪಿಯ ಕೈ ಮತ್ತಷ್ಟು ಬಲಪಡಿಸಬೇಕು ಎಂದರು.
ಕೇವಲ ರಾಜ್ಯ ದೇಶದಷ್ಟೇ ಅಲ್ಲ. ಇಡಿ ಜಗತ್ತು ಮೋದಿಯವರನ್ನು ವಿಶ್ವ ನಾಯಕನೆಂದು ಒಪ್ಪಿಕೊಂಡಿದೆ. ರಾಜ್ಯದ ಜನರ ನಾಡಿಮಿಡಿತ ಗೊತ್ತಿದೆ. ಈ ಬಾರಿ ನಿಶ್ಚಿತವಾಗಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನತೆಯ ಪರವಾಗಿ ಕೇಸರಿ ಶಾಲು, ಶಿವಾಜಿ ಮಹಾರಾಜರ ಪೇಟ ಹಾಗೂ ಆಂಜನೇಯ ಸ್ವಾಮಿಯ ವಿಗ್ರಹ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಪ್ರಮುಖರಾದ ಗಿರೀಶ್ ಪಟೇಲ್, ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ್, ಹರತಾಳು ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.









Discussion about this post