ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋವಿಡ್ ಮತ್ತು ಇದರ ರೂಪಾಂತರಿ ಸೋಂಕನ್ನು ನಿಯಂತ್ರಿಸಲು ಸರ್ಕಾರ ಇದೀಗ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಆರಂಭಿಸಿದ್ದು, ಮಕ್ಕಳು ಯಾವುದೇ ರೀತಿಯ ಗೊಂದಲ ಮತ್ತು ಭಯಕ್ಕೀಡಾಗದೇ ನಿರಾಂತಕವಾಗಿ ಲಸಿಕೆಯನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಪದವಿಪೂರ್ವ ಕಾಲೇಜು, ಸೈನ್ಸ್ ಮೈದಾನ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್, ಸೈನ್ಸ್ ಮೈದಾನ ಇಲ್ಲಿ ಏರ್ಪಡಿಸಲಾಗಿದ್ದ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ -19 ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಸಮಾಜದ ವಿಭಿನ್ನ ವಯೋಮಿತಿಯ ಗುಂಪುಗಳೊಂದಿಗೆ ನಿತ್ಯ ಒಡನಾಡುತ್ತಾ, ಸಂಪರ್ಕದಲ್ಲಿರುತ್ತಾರೆ. ಆದ ಕಾರಣ ಮಕ್ಕಳಿಗೂ ಹಂತ ಹಂತವಾಗಿ ಕೋವಿಡ್ ಲಸಿಕೆ ಹಾಕುವ ಮೂಲಕ ಕೋವಿಡ್‍ನಿಂತ ಮಕ್ಕಳನ್ನು ರಕ್ಷಿಸಲು ಸರ್ಕಾರ ಮೊದಲನೇ ಹಂತದಲ್ಲಿ 15 ರಿಂದ 18 ವಯೋಮಿತಿಯ ಮಕ್ಕಳಿಗೆ 10 ದಿನಗಳ ಲಸಿಕಾ ಕಾರ್ಯಕ್ರಮ ಆಯೋಜಿಸಿದೆ.
ಲಸಿಕೆ ಬಗ್ಗೆ ಮಕ್ಕಳಲ್ಲಿ ಎರಡನೇ ಯೋಚನೆಯೇ ಬೇಡ. ಲಸಿಕೆ ಸುರಕ್ಷಿತವಾಗಿದ್ದು ಯಾವುದೇ ರೀತಿಯಲ್ಲಿ ಆತಂಕ ಪಡುವುದು ಬೇಡ. ನಾವೆಲ್ಲ ಎರಡು ಡೋಸ್ ಲಸಿಕೆ ಪಡೆದು ಆರೋಗ್ಯವಾಗಿದ್ದೇವೆ ಎಂದ ಅವರು ಮೊದಲೆರಡು ಅಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ ಎಂದರು.
ಪ್ರಸ್ತತ ನಮ್ಮ ರಾಜ್ಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ತೀವ್ರವಾಗಿ ಹರಡುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ಕಾಣುತಿದ್ದೇವೆ. ಆದ ಕಾರಣ ನಾವೆಲ್ಲ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದರು.
ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ಮಾತನಾಡಿ, ಕೋವಿಡ್‍ನಿಂದ ಹೊರಬರಬೇಕೆಂದರೆ ನಾವೆಲ್ಲ ಕೋವಿಡ್ ನಿಯಮಗಳನ್ನು ಪಾಲಿಸುವುದರ ಜೊತೆಗೆ ಎರಡು ಡೋಸ್ ಲಸಿಕೆ ಪಡೆಯಬೇಕು. ಸರ್ಕಾರ ಇದೀಗ ಮಕ್ಕಳಿಗೂ ಲಸಿಕಾಕರಣ ಆರಂಭಿಸಿದ್ದು ಎಲ್ಲ ಅರ್ಹ ಮಕ್ಕಳು ಯಾವುದೇ ಭಯಕ್ಕೀಡಾಗದೇ ಲಸಿಕೆ ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಶಾಲೆಗಳು ನಡೆಯುತ್ತಿವೆ. ಶಾಲೆಗಳು ಮತ್ತು ಹಾಸ್ಟೆಲ್‍ಗಳಲ್ಲಿ ಸೋಂಕು ಹರಡುವ ಸಂಭವ ಹೆಚ್ಚಿದ್ದು, ಮಕ್ಕಳು ಸರತಿ ಪ್ರಕಾರ ಲಸಿಕೆಯನ್ನು ಪಡೆಯುವ ಮೂಲಕ ಲಸಿಕಾಕರಣದ ಯಶಸ್ಸಿಗೆ ಸಹಕರಿಸಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಜ.3ರಿಂದ 12 ರವರೆಗೆ 15 ರಿಂದ 18 ವರ್ಷದ 83,831 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 35 ಸಾವಿರ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು ಜ.03 ರಂದು ಒಟ್ಟು 74 ಸೈಟ್‍ಗಳಲ್ಲಿ ಲಸಿಕಾಕರಣ ನಡೆಯಲಿದೆ. ಹಾಗೂ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಕ್ರಿಯಾ ಯೋಜನೆಯನ್ನು ತಯಾರಿಸಿದ್ದು, ಈ ಯೋಜನೆಯಂತೆ ಜಿಲ್ಲೆಯ ಎಲ್ಲ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಲಸಿಕೆ ನೀಡಲಾಗುವುದು.
ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಪ್ರಾಂಶುಪಾಲರು ಕಾರ್ಯ ನಿರ್ವಹಿಸಲಿದ್ದಾರೆ. ಲಸಿಕೆ ನೀಡಿದ ನಂತರ ಮಕ್ಕಳಲ್ಲಿ ಏನಾದರೂ ತೊಂದರೆ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲು 05 ಪ್ರಾಥಮಿಕ ಆರೋಗ್ಯಗಳು ಒಳಗೊಂಡಂತೆ ಒಂದು ಆಂಬುಲೆನ್ಸ್ ನಿಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರವಾರು ನೋಡಲ್ ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಹಾಗೂ ಶಾಲೆಗಳಲ್ಲಿ ಮಕ್ಕಳ ಜನನ ದೃಢೀಕರಣ ನೋಡಿಕೊಳ್ಳಲು ಒಬ್ಬ ಶಾಲಾ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
28 ದಿನಗಳ ಅಂತರದಲ್ಲಿ 2ನೇ ಡೋಸ್: 2007 ನೇ ಸಾಲು ಮತ್ತು ಜನವರಿ 2007 ರ ಮೊದಲು ಜನಿಸಿರುವ ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಈಗಾಗಲೇ ಚಾಲ್ತಿಯಲ್ಲಿರುವ ಕೋವ್ಯಾಕ್ಸಿನ್ ಲಸಿಕೆಯ 0.5 ಎಂ.ಎಲ್ ಇಂಟ್ರಾಮಸ್ಕುಲರ್ 02 ಡೋಸ್ ಚುಚ್ಚುಮದ್ದನ್ನು 28 ದಿನಗಳ ಅಂತರದಲ್ಲಿ ನಿಡಲಾಗುತ್ತದೆ. ಫಲಾನುಭವಿ ಮಕ್ಕಳು ಸ್ವಂತ ಮೊಬೈಲ್ ಸಂಖ್ಯೆ ಅಥವಾ ಕೋವಿನ್‍ನಲ್ಲಿ ಈಗಾಗಲೇ ನೋಂದಣಿಯಾಗಿರುವ ಪೋಷಕರ ಸಂಖ್ಯೆಲ್ಲಿ ಮಾಡಿಕೊಳ್ಳಬಹದು. ಇದು ಯಾವುದೂ ಲಭ್ಯವಿಲ್ಲದಿದ್ದರೆ ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಅನುಮತಿ ಪತ್ರದೊಂದಿಗೆ ಲಸಿಕೆ : ಬೆಳಿಗ್ಗೆಯಿಂದಲೇ ಅನುಮತಿ ಪತ್ರ ಬರೆದು ಸಿದ್ದ ಮಾಡಿಕೊಂಡ ಮಕ್ಕಳು ಸರತಿ ಸಾಲಿನಲ್ಲಿ ನಿಂತು ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದರು. ಸ.ಪ.ಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿಜಾದ್ ಖಾನ್ ಮೊದಲ ಲಸಿಕೆ ಪಡೆದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ವೈ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಆರ್‍ಸಿಹೆಚ್‍ಓ ಡಾ.ನಾಗರಾಜ್‍ನಾಯ್ಕ, ಡಿಡಿಪಿಯು ನಾಗರಾಜ್ ಕಾಗಲ್‍ಕರ್, ಡಿಡಿಪಿಐ ರಮೇಶ್, ಟಿಹೆಚ್‍ಓ ಡಾ.ಚಂದ್ರಶೇಖರ್ ಇದ್ದರು. ಆಂಗ್ಲಭಾಷೆ ಉಪನ್ಯಾಸಕ ಯೋಗೀಶ್.ಎಸ್ ಸ್ವಾಗತಿಸಿದರು. ಬಿಹೆಚ್‍ಇಓ ಪ್ರತಿಮಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post