ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ರಚಿಸಲಾಗಿರುವ ಕಾರ್ಯಪಡೆ ಕರೋನಾ ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದ ಈ ಕಾರ್ಯಪಡೆಯಲ್ಲಿ ಪಿಡಿಒ ಸದಸ್ಯ ಕಾರ್ಯದರ್ಶಿಯಾಗಿದ್ದು, ಪೊಲೀಸ್ ಇಲಾಖೆ, ಶಿಕ್ಷಣ, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಮತ್ತು ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು ಇದ್ದಾರೆ. ಹೊಂ ಕ್ವಾರೆಂಟೈನ್ ಬಗ್ಗೆ ನಿಗಾ ವಹಿಸಲು ರಚಿಸಲಾಗಿದ್ದ ಗ್ರಾಮ ಪಂಚಾಯತ್ ಹೆಲ್ಪ್ ಡೆಸ್ಕ್‍ಗಳು ಇನ್ನು ಮುಂದೆ ಸಮುದಾಯ ಸಹಾಯವಾಣಿಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದರು.
ಗ್ರಾಮಾಂತರ ಪ್ರದೇಶಗಳಿಗೆ ಹಿಂತಿರುವ ವಲಸೆ ಕಾರ್ಮಿಕರಿಗೆ ಮತ್ತಿತರರಿಗೆ ನರೇಗಾ ಅಡಿಯಲ್ಲಿ ಉದ್ಯೋಗ ಒದಗಿಸುವುದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ ತಡೆಗಟ್ಟಲು ಕಾರ್ಯನಿರ್ವಹಿಸುವ ಸ್ವಯಂ ಸೇವಕರನ್ನು ಗುರುತಿಸಿ, ಪಾಳಿ ವ್ಯವಸ್ಥೆಯಲ್ಲಿ ಅವರ ಸೇವೆ ಪಡೆಯುವುದು, ಸಮುದಾಯ ಸಹಾಯವಾಣಿ ಆರಂಭಿಸುವುದು, ಅವಶ್ಯ ಮಾಸ್ಕ್, ಸಾಬೂನು ಮತ್ತು ಸ್ಯಾನಿಟೈಸರ್, ಸ್ವಚ್ಛತಾ ಪರಿಕರಗಳನ್ನು ಖರೀದಿಸಲು ಗ್ರಾಮ ಪಂಚಾಯತ್‍ಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಅನುದಾನ ಮಂಜೂರು:
ನರೇಗಾ ಯೋಜನೆಯಡಿ ಕಳೆದ ಸಾಲಿನಲ್ಲಿ ಬಾಕಿ ಇದ್ದ 89 ಕೋಟಿ ರೂ ಮತ್ತು ಪ್ರಸ್ತುತ ಸಾಲಿನ 284ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ 77ಕೋಟಿ ರೂ. ಕೂಲಿ ಮೊತ್ತವನ್ನು ಫಲಾನುಭವಿಗಳಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post