ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸಲು ಬಾಲ್ಯದಿಂದಲೇ ಅವರಿಗೆ ಸಾಹಿತ್ಯ ಓದುವ ಹವ್ಯಾಸವನ್ನು ರೂಢಿಸಬೇಕು ಎಂದು ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಸಲಹೆ ನೀಡಿದರು.
ನಿದಿಗೆ ಬಳಿಯಿರುವ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಲೋಕಾ ಸಮಸ್ತ ಸುಖಿನೋ ಭವಂತು ಎಂಬ ಆಶಯದ ಅಡಿಯಲ್ಲಿ ನಡೆದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮ್ಮ ಮಕ್ಕಳಿಗೆ ಸಾಹಿತ್ಯ ಓದು ಹವ್ಯಾಸವನ್ನು ರೂಢಿಸಬೇಕು. ಇದಕ್ಕಾಗಿ ಮಕ್ಕಳಿರುವ ಪ್ರತಿ ಮನೆಯಲ್ಲೂ ಒಂದು ನ್ಯೂಸ್ ಪೇಪರ್ ಓದುವ ಅಭ್ಯಾಸ ಇರಬೇಕು. ಇದರಿಂದ ಮಕ್ಕಳಲ್ಲಿ ಓದುವ ಗೀಳು ಬೆಳೆಯುತ್ತದೆ. ಜೊತೆಯಲ್ಲಿ ಮನೆಯಲ್ಲಿ ಓದುವ ವಾತಾವರಣ ಸೃಜಿಸಬೇಕು. ಇದಕ್ಕಾಗಿ ಪ್ರತಿ ಮಕ್ಕಳಿಗೆ ಒಂದು ಸ್ಟಡಿ ಟೇಬಲ್ ಕೊಡಿಸಿ, ಅಲ್ಲಿಯೇ ಕುಳಿತು ಓದುವುದು, ಬರೆಯುವುದನ್ನು ಕಲಿತಾಗ ಇದರಲ್ಲಿನ ಆಸಕ್ತಿ ಹೆಚ್ಚಾಗುತ್ತದೆ ಎಂದರು.
ಮಕ್ಕಳಲ್ಲಿ ಅವರಲ್ಲಿರುವ ಆಸಕ್ತಿಯೇ ಒಳ್ಳೆಯ ಸ್ನೇಹಿತ. ಇದರೊಂದಿಗೆ ಬಾಲ್ಯದಿಂದಲೇ ಅವರಲ್ಲಿನ ಸೃಜನಶೀಲತೆ ಹಾಗೂ ಪ್ಯಾಶನ್ ಗುರುತಿಸಿ ನೀರೆರೆದು ಪ್ರೋತ್ಸಾಹಿಸಬೇಕು. ಇದರೊಂದಿಗೆ ಎಳವೆಯಿಂದಲೇ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿದಾಗ ಅದು ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ದೇಶಕ್ಕೆ ಆಸ್ತಿಯಾಗುತ್ತಾರೆ. ಇಂತಹ ಸತ್ಕಾರ್ಯವನ್ನು ಜೈನ್ ಪಬ್ಲಿಕ್ ಶಾಲೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಜೈನ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಕ್ರಮದ ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಗಳು, ಸಾಮಾಜಿಕ ಹಾಗೂ ನಮ್ಮ ನೆಲಮೂಲ ಸಂಸ್ಕೃತಿಯ ಸೊಗಡನ್ನು ಕಟ್ಟಿಕೊಡುವ ಕಾರ್ಯಕ್ಕೆ ಮಹತ್ವ ನೀಡುತ್ತಿರುವುದು ಇಲ್ಲಿನ ವಾತಾವರಣದಿಂದ ತಿಳಿಯುತ್ತದೆ. ನಿಜಕ್ಕೂ ಇದೊಂದು ಮಾದರಿ ಶಾಲೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಾಂಶುಪಾಲೆ ಪ್ರಿಯದರ್ಶಿನಿ ಮಾತನಾಡಿ, ಶಾಲೆಯ ಸಂಪೂರ್ಣ ವಾರ್ಷಿಕ ವರದಿಯನ್ನು ಮಂಡಿಸಿದರು.
2021-22ನೆಯ ಸಾಲಿನಲ್ಲಿ 10ನೆಯ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸಂಪ್ರದಾಯ, ಆಚಾರ-ವಿಚಾರ, ವಿವಿಧ ಧರ್ಮಗಳು, ಪರಿಸರ ಜಾಗೃತಿ, ಜಾನಪದ ಕಲೆ, ಹೊಯ್ಸಳ ಸಾಮ್ರಾಜ್ಯದ ಸ್ಥಾಪನೆ, ಕೊರೋನಾ ಜಾಗೃತಿ, ಯೋಧರಿಗೆ ನಮನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಪ್ರಮುಖವಾಗಿ ಕರ್ನಾಟಕ ರತ್ನ ದಿ.ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ನಡೆದ ನೃತ್ಯ ಹಾಗೂ ಸಭಿಕರು ತಮ್ಮ ಮೊಬೈಲ್ ಟಾರ್ಚ್ ಹಾಕಿ ನಮನ ಸಲ್ಲಿಸಿದ್ದು ಮನಮುಟ್ಟುವಂತಿತ್ತು.
ಜೆಜಿಐ ಕ್ಲಸ್ಟರ್ ಹೆಡ್ ಶರತ್ ಕುಮಾರ್, ಸಂಯೋಜಕರಾದ ದಿವ್ಯಾ ಶೆಟ್ಟಿ, ಸಿಒಒ ಸುಮಂತ್ ಆರ್, ಸೌಲಭ್ಯ ವ್ಯವಸ್ಥಾಪಕ ವಿಜಯ್ ಕುಮಾರ್, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಪೋಷಕರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post