ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯ ನಗರ, ಪಟ್ಟಣ ಹಾಗೂ 268 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸಮರ್ಪಕವಾಗಿ ಬೇರ್ಪಡಿಸಿ, ನಿಯಮಾನುಸಾರ ವಿಲೇವಾರಿ ಮಾಡಲು ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಿದ್ದ ತ್ಯಾಜ್ಯ ನಿರ್ವಹಣೆ, ಕೆರೆಗಳ ಒತ್ತುವರಿ, ರಸ್ತೆ ಸುರಕ್ಷತೆ, ಕಾರ್ಮಿಕ ಪದ್ದತಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಸ್ಥಿತಿಗತಿಗಳ ಕುರಿತು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತ್ಯಾಜ್ಯವಸ್ತುಗಳ ವಿಲೇವಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಮುಂದಿನ ಮಾಸಿಕ ಸಭೆಯಲ್ಲಿ ಅಗತ್ಯ ಮಾಹಿತಿಯೊಂದಿಗೆ ಆಗಮಿಸುವಂತೆ ಸೂಚಿಸಿದ ಅವರು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ತ್ಯಾಜ್ಯದ ವಿಲೇವಾರಿಯ ಬಗ್ಗೆಯೂ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಈವರೆಗೆ ಸ್ಥಳಾವಕಾಶ ಗುರುತಿಸದಿರುವ ಗ್ರಾಮಗಳಲ್ಲಿ ಸ್ಥಳ ಗುರುತಿಸುವಂತೆ, ಅಥವಾ ನೆರೆಯ ಗ್ರಾಮಗಳಲ್ಲಿ ಅಥವಾ ಸಮೀಪದ ಪಟ್ಟಣ ಪ್ರದೇಶಗಳಲ್ಲಿನ ಸ್ಥಳೀಯ ಸಂಸ್ಥೆಗಳ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ ಸರ್ಕಾರದ ಆದೇಶವಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಳಂಬವಾಗುತ್ತಿದೆ. ಈ ಸಂಬಂಧ ತಹಶೀಲ್ದಾರರುಗಳು, ಪರಿಸರ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು. ಪ್ಲಾಸ್ಟಿಕ್ ಬಳಸುವವರ ಹಾಗೂ ಅದನ್ನು ಪ್ರೇರೇಪಿಸುವವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದ ಅವರು, ಸಕ್ಷಮ ಪ್ರಾಧಿಕಾರಿಗಳಾಗಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲೆಯ ಕೆಲವು ಕಡೆಗಳಲ್ಲಿ ಜೀತದಾಳು ಪದ್ದತಿ ಜೀವಂತವಿರುವುದು ನೋವಿನ ಸಂಗತಿಯಾಗಿದೆ. ಇಟ್ಟಿಗೆ ಭಟ್ಟಿ, ಕಲ್ಲುಗಣಿ ಮುಂತಾದ ಕಡೆಗಳಲ್ಲಿ ಇಂತಹ ಪ್ರಕರಣಗಳು ಜೀವಂತವಾಗಿರುವ ಸಾಧ್ಯತೆ ಇದ್ದು, ಇಂತಹ ಸ್ಥಳಗಳಿಗೆ ಪೊಲೀಸ್, ಕಂದಾಯ ಹಾಗೂ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ದಿಢೀರ್‌ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದವರು ನುಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾಲಕಾಲಕ್ಕೆ ಸಭೆ ಕರೆದು ಪ್ರಗತಿ ಪರಿಶೀಲಿಸಬೇಕು. ಮುಂದಿನ ಸಭೆಯಲ್ಲಿ ಗುರುತಿಸಲಾಗಿರುವ ಜೀತಕಾರ್ಮಿಕರಿಗೆ ಸಂಬಂಧಿಸಿದಂತೆ ಪುನರ್ವಸತಿ ಕಲ್ಪಿಸಿರುವ ಹಾಗೂ ವ್ಯಯ ಮಾಡಲಾದ ಹಣಕಾಸಿನ ವಿವರಗಳನ್ನು ಒದಗಿಸುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೆರೆಗಳ ಒತ್ತುವರಿಯಾಗಿರುವ ಬಗ್ಗೆ ದೂರುಗಳು ದಾಖಲಾಗುತ್ತಲೇ ಇವೆ. ಈ ಕೆರೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿ, ಸರ್ವೇ ಮಾಡಿಸಿ, ಒತ್ತುವರಿಯಾಗಿದ್ದಲ್ಲಿ ಒತ್ತುವರಿ ತೆರೆವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ಕಾಗಿ ಮಾಸಿಕವಾಗಿ ಗುರಿನಿಗಧಿಪಡಿಸಿಕೊಳ್ಳಬೇಕೆಂದವರು ಅವರು ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಕ್ರಮವನ್ನು ಕ್ಷಮಿಸಲಾಗುವುದಿಲ್ಲ ಎಂದರು.
ರಸ್ತೆ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಪೊಲೀಸ್, ಲೋಕೋಪಯೋಗಿ ಇಲಾಖಾಧಿಕಾರಿಗಳ ಸಲಹೆ ಪಡೆದು ಕ್ರಮವಹಿಸಲಾಗುವುದು. ಶಾಲೆ, ಆಸ್ಪತ್ರೆ ಮುಂತಾದ ಸ್ಥಳಗಳಲ್ಲಿ ನಿಶ್ಶಬ್ಧ ವಲಯವನ್ನು ಗುರುತಿಸುವಂತೆ ಸೂಚಿಸಲಾಗಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರ ಪಡೆಯುವಂತೆ ಸೂಚಿಸಿದರು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಇಲಾಖಾಧಿಕಾರಿಗಳು ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿ ಮಾಹಿತಿ ನೀಡದಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಸಕಾಲದಲ್ಲಿ ಒದಗಿಸುವಂತೆ ಸೂಚಿಸಿದ ಅವರು, ಪ್ರಕರಣಗಳ ವಿಚಾರಣೆಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನಿರ್ವಹಿಸಿ, ಮಾಹಿತಿ ದಾಖಲಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post