ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಲ್ಲಿ ಕಂಡುಬರುವ ಅತಿಸಾರ ಬೇಧಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಕೂಡಲೇ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬಸವನಗುಡಿ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿಸಾರ ಬೇಧಿಯಿಂದಾಗುವ ಮಕ್ಕಳ ಸಾವನ್ನು ತಪ್ಪಿಸಲು ಸರ್ಕಾರ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಪಾಕ್ಷಿಕದಲ್ಲಿ ಪ್ರತಿ ಮನೆ ಮನೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಬಂದು ಅತಿಸಾರ ಬೇಧಿ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವರು. ಹಾಗೂ ಓಆರ್‍ಎಸ್ ಪಾನಕ ತಯಾರಿಸುವ ಬಗೆಯನ್ನು ತಿಳಿಸಿ ಓಆರ್‍ಎಸ್ ಪೊಟ್ಟಣ ನೀಡುವರು. ಈ ಪಾನಕ ಮಾಡುವುದು ಕಷ್ಟವಲ್ಲ. ಸರಳವಾಗಿದ್ದು, ಇದನ್ನು ಬೇಧಿ ಆಗುವ ಸಮಯ ನೀಡಲೇಬೇಕು.
ಇದಿಲ್ಲವಾದರೆ ಮನೆಯಲ್ಲಿ ನೀರನ್ನು ಕಾಯಿಸಿ ಆರಿಸಿ ಅದಕ್ಕೆ ಚಿಟಕಿ ಉಪ್ಪು ಮತ್ತು ಸಕ್ಕರೆ ಸೇರಿಸಿದ ನೀರನ್ನು ನೀಡುತ್ತಿರಬೇಕು ಎಂದರು.

ಪಾಲಿಕೆ ಸದಸ್ಯ ರಮೇಶ್ ಹೆಗಡೆ ಮಾತನಾಡಿ, ಮೊದಲು ಜನರ ರಕ್ಷಣೆ ಮತ್ತು ಆಡಳಿತ ಮಾತ್ರ ಸರ್ಕಾರದ ಕರ್ತವ್ಯವಾಗಿತ್ತು. ಆದರೆ ಈಗ ಎಲ್ಲರ ಕಲ್ಯಾಣ ಮತ್ತು ಆರೋಗ್ಯ ಸರ್ಕಾರದ ಹೊಣೆಯಾಗಿದೆ. ಆದ್ದರಿಂದ ಸರ್ಕಾರ ಆರೋಗ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ತಾಯಂದಿರಾದ ನೀವು ಅತಿಸಾರ ಬೇಧಿ ನಿಯಂತ್ರಣ, ಲಸಿಕೆ ಹಾಕಿಸುವುದು ಸೇರಿದಂತೆ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಸಮುದಾಯದಲ್ಲಿ ಈ ಕುರಿತು ಉಳಿದವರಿಗೂ ತಿಳಿಸಬೇಕು.

Also read: ಸಚಿನ್ ತೆಂಡೂಲ್ಕರ್ 2 ದಾಖಲೆ ಪುಡಿಗಟ್ಟಿದ ವಿರಾಟ್ ಕೋಹ್ಲಿ ಅಬ್ಬರಕ್ಕೆ ವಿಶ್ವವೇ ಫಿದಾ
ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಯಾವುದೇ ಮಗುವಿಗೆ ಕನಿಷ್ಟ 2 ವರ್ಷದವರೆಗೆ ತಾಯಿ ಹಾಲನ್ನು ಕುಡಿಸಬೇಕು. ಆರು ತಿಂಗಳವರೆಗೆ ಯಾವುದೇ ಪೂರಕ ಆಹಾರ ನೀಡದೆ ಕೇವಲ ಎದೆಹಾಲು ಕುಡಿಸಬೇಕು. ಮಗುವಿಗೆ ಬೇಧಿ ಶುರುವಾಗಿದೆ ಎಂದು ಎದೆ ಹಾಲು ನಿಲ್ಲಿಸಬಾರದು. ಯಾಕೆಂದರೆ ತಾಯಿಹಾಲಿನಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶ ಜೊತೆಗೆ ನೀರು ಇರುವುದರಿಂದ ಇದು ಅತ್ಯುತ್ತಮ ಆಹಾರ. ಶೇ.80 ರಷ್ಟು ವೈರಲ್ ಅತಿಸಾರ ಬೇಧಿಗೆ ರೋಟಾವೈರಸ್ ಲಸಿಕೆ ನೀಡಲಾಗುವುದು. ಸ್ವಚ್ಚತೆ, ಕೈತೊಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಅತಿಸಾರ ಬೇಧಿ ವೇಳೆ ಹಣ್ಣಿನ ರಸ, ನಿಂಬೆ ಪಾನಕ, ಚಿಟಿಕೆ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರು ಅಥವಾ ಓಆರ್‍ಎಸ್ ಪಾನಕವನ್ನು ನೀಡುತ್ತಿರಬೇಕು ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಕಾಣುವ ಪಕ್ಕೆ ನೋವು-ಬಾಲ್ಯಾವಧಿ ನ್ಯೂಮೋನಿಯಾ ನಿರ್ವಹಣೆ ಕಾರ್ಯಕ್ರಮದಡಿ ಸಮುದಾಯಲ್ಲಿ ಅರಿವು ಮೂಡಿಸಲಾಗುವುದು. ಪಕ್ಕೆ ನೋವು, ಶ್ವಾಸಕೋಸದ ಸೋಂಕಿರುವ ಮಕ್ಕಳಿಗೆ ತಕ್ಷಣ ಚಿಕಿತ್ಸೆ ನೀಡಬೇಕು. ಹಾಗೂ ಎಲ್ಲಾ ಅರ್ಹ ಮಕ್ಕಳಿಗೆ 3 ಡೋಸ್ ಪಿಸಿವಿ ಲಸಿಕೆಯನ್ನು ತಪ್ಪದೆ ನೀಡಬೇಕು ಎಂದರು.

ಇದೇ ವೇಳೆ ಸಿಡಿಪಿಓ ಚಂದ್ರಪ್ಪ ಓಆರ್‍ಎಸ್ ಪಾನಕ ತಯಾರಿಕೆ ವಿಧಾನವನ್ನು ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಆರೋಗ್ಯ ಶಿಕ್ಷಣಾಧಿಕಾರಿ ಅಕ್ತರ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು, ತಾಯಂದಿರು ಹಾಜರಿದ್ದರು.









Discussion about this post