ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜು ಮತ್ತು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಡಂಬಡಿಕೆಯ ಮೂಲಕ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಬೋಧಕ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕತೆಯ ಜೊತೆಗೆ ಪ್ರಸ್ತುತ ಹೆದ್ದಾರಿ ಮತ್ತು ಸಾರಿಗೆ ಕ್ಷೇತ್ರದಲ್ಲಿನ ಹಲವು ಬೆಳವಣಿಗೆಗಳು ತಿಳಿಯಲು ಮತ್ತು ನೂತನ ಯೋಜನೆಗಳಿಗೆ ಪ್ರಾಧಿಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಿದೆ ಎಂದು ಜೆಎನ್‌ಎನ್‌ಸಿ ತಿಳಿಸಿದೆ.
ಇದರ ಜೊತೆಗೆ ಕಾಲೇಜಿನ ಆವರಣದಲ್ಲಿ ಹೆದ್ದಾರಿ ಮತ್ತು ಸಾರಿಗೆ ಕ್ಷೇತ್ರದ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ರಸ್ತೆಗಳ ಗುಣಮಟ್ಟ ಸುಧಾರಣೆ ಸೇರಿದಂತೆ ಪ್ರಾಧಿಕಾರ – ತಜ್ಞರೊಂದಿಗೆ ಹಲವು ಆಯಾಮಗಳ ಕುರಿತು ಸಂಶೋಧನೆಗಳು ಇಲ್ಲಿ ನಡೆಯಲಿವೆ. ಇದರ ಸಂಪೂರ್ಣ ಪ್ರಾಯೋಜಕತ್ವವನ್ನು ಎನ್‌ಹೆಚ್‌ಎಐ ವಹಿಸಲಿದೆ. ಪ್ರತಿ ವರ್ಷ ಕಾಲೇಜಿನ ಹಲವು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎನ್‌ಹೆಚ್‌ಎಐ ಇಂಟರ್ನ್‌ಶಿಪ್ ನೀಡಲಿದ್ದು ಪದವಿ ವಿದ್ಯಾರ್ಥಿಗಳಿಗೆ 6,500ರೂ. ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 10,000ರೂ. ಸಹಾಯ ಧನ ದೊರೆಯಲಿದೆ ಎಂದು ವಿವರಿಸಲಾಗಿದೆ.
ಪ್ರಸ್ತುತ ರಾಷ್ರೀಯ ಹೆದ್ದಾರಿ 206ರ ಬೆಟ್ಟದಹಳ್ಳಿಯಿಂದ ಶ್ರೀರಾಂಪುರವರೆಗಿನ ಸುಮಾರು 56.35 ಕಿ.ಮೀ ಹೆದ್ದಾರಿ ಕಾಮಗಾರಿ ನಿರ್ವಹಣೆಯನ್ನು ಜೆಎನ್‌ಎನ್‌ಸಿಇ ಕಾಲೇಜು ಸಾಮಾಜಿಕ ಜವಬ್ದಾರಿಯಾಗಿ ಅಳವಡಿಸಿಕೊಳ್ಳಲಿದ್ದು, ಕಾಮಗಾರಿಯ ಗುಣಮಟ್ಟ ಕಾಪಾಡುವ ಹಿನ್ನಲೆಯಲ್ಲಿ ಪ್ರಾಧಿಕಾರದೊಂದಿಗೆ ಕೂಡಿ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಕಾರದೊಂದಿಗೆ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಮಂಜುನಾಥ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ. ಎಂ.ಎಂ. ರಜತ್ ಹೆಗಡೆ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್.ಕಾರ್ತಿಕ್, ಸಹ ಪ್ರಾದ್ಯಾಪಕ ವಿ.ಅರುಣ್ ನೇತೃತ್ವದಲ್ಲಿ ಈ ಯೋಜನೆ ಮುನ್ನಡೆಯಲಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳಿಗೆ ಎನ್‌ಹೆಚ್‌ಎಐ ನಡೆಸುವ ನೇರ ಯೋಜನೆಗಳೊಂದಿಗೆ ತೊಡಗಿಸಿಕೊಳ್ಳಲು ಹಾಗೂ ಕ್ಷೇತ್ರದ ನುರಿತ ತಜ್ಞರೊಂದಿಗೆ ಹೊಸ ವಿಷಯಗಳನ್ನು ಕಲಿಯಲು ಈ ಯೋಜನೆ ಪೂರಕ ವೇದಿಕೆಯಾಗಿದೆ. ಉದ್ಯಮ ಮತ್ತು ಶೈಕ್ಷಣಿಕತೆಯ ನಡುವಿನ ಅಂತರವನ್ನು ಕಡಿಮೆಗೊಳಿಸುವ ಮೂಲಕ ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post