ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭವಿಷ್ಯದಲ್ಲಿ ಬೆಳೆಯಬೇಕೆಂಬ ಹಂಬಲವನ್ನು ಪ್ರತಿಯೊಬ್ಬ ಚಿಣ್ಣರು ಬೆಳೆಸಿಕೊಳ್ಳಬೇಕೆಂದು ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಪಟು ಮತ್ತು ಭಾರತಕ್ಕೆ ವಿಶ್ವಕಪ್ ದೊರಕಿಸಿ ಕೊಟ್ಟಿರುವ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಕಿವಿ ಮಾತು ಹೇಳಿದರು.
ನಗರದ ತುಳಜಾ ಭವಾನಿ ರಸ್ತೆಯಲ್ಲಿರುವ ತುಳಜಾ ಭವನ್ ಸಭಾಂಗಣದಲ್ಲಿ, ಭಾವಸಾರ ಕ್ಷತ್ರಿಯ ಯುವಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಷ್ಟದ ಸಂದರ್ಭದಲ್ಲಿ ಹುಲ್ಲು ಗರಿಕೆ ಕೂಡ ಕೆಲಸಕ್ಕೆ ಬರುತ್ತದೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಯಾರನ್ನೂ ಕೂಡ ಕಡೆಗಣಿಸದೇ, ಪ್ರತಿಯೊಬ್ಬರನ್ನು ಎಲ್ಲರೂ ಗೌರವಿಸಬೇಕು. ಯಾರನ್ನೂ ಕೂಡ ಕಡೆಗಣಿಸದೇ, ಅವರನ್ನು ನಮ್ಮ ಜೊತೆ ತೆಗೆದುಕೊಂಡು ಹೋಗುವ ಮೂಲಕ, ಕಷ್ಟದಲ್ಲಿರುವವರನ್ನು ಕೂಡ ಸಹಾಯ ಮಾಡಿ ಎಂದು ಕರೆ ನೀಡಿದರು.
ಬಡತನದಲ್ಲಿ ಹುಟ್ಟಿ ಬೆಳೆದಿದ್ದ ನನಗೆ ನನ್ನ ತಾಯಿಯೇ ಸ್ಪೂರ್ತಿಯಾಗಿದ್ದು, ಅವರಿಗೂ ಕೂಡ ಕಣ್ಣು ಕಾಣಿಸುತ್ತಿರಲಿಲ್ಲ. ಸುಮಾರು 8 ವರ್ಷದವರೆಗೆ ನನಗೂ ಕೂಡ ಕಣ್ಣು ಕಾಣದೇ, ದೃಷ್ಟಿ ಹೀನತೆ ಅನುಭವಿಸಿದ್ದೆನೆ. ಕೆಲವು ಸಂದರ್ಭಗಳು ನನಗೆ ಈ ಮಟ್ಟಿಗೆ ಬೆಳೆಯಲು ಕಾರಣವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳೊಂದಿಗೆ ಕ್ರಿಕೆಟ್ ಆಟವಾಡಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ನನ್ನಂತೆಯೇ ದೃಷ್ಟಿ ಹೀನತೆ ಅನುಭವಿಸುತ್ತಿರುವ ಮಕ್ಕಳಿಗೆ ಬೆಂಗಳೂರಿನಲ್ಲಿ, ಶೇಖರ್ ನಾಯ್ಕ್ ಕ್ರಿಕೆಟ್ ಫೌಂಡೇಷನ್ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಮಾತನಾಡಿ, ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಗಳು ಇರಲಿ ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೋತ್ಸಾಹ ದೊರಕಬೇಕಿದೆ. ಸರ್ಕಾರೇತರ ಸಂಘ ಸಂಸ್ಥೆಗಳು, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರೆ, ಕ್ರೀಡಾಪಟುಗಳು ಮತ್ತಷ್ಟು ಸಾಧನೆ ತೋರಲು ಸಾಧ್ಯವಾಗುತ್ತದೆ. ನಾನು ಏಷ್ಯಾ ಗೇಮ್ಸ್ ಪಂದ್ಯಾವಳಿಗೆ ಭಾರತ ದೇಶದ ಕಬ್ಬಡಿ ತಂಡಕ್ಕೆ ಮ್ಯಾನೇಜರ್ ಆಗಿ ಹೋಗಿದ್ದು, ಅಲ್ಲಿ ನನಗೆ ಕ್ರೀಡಾಪಟುಗಳ ನೋವುಗಳು ಅರ್ಥವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಟುವಾಗಿರುವ ಭಾರತ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ದೇಶದ ಅತ್ಯುನ್ನತ ಪ್ರಶಸ್ತಿಯಾಗಿರುವ ಪದ್ಮಶ್ರೀ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ್ ನಾಯ್ಕ್ ಅವರಿಗೆ “ವಿಶ್ವಪ್ರಜ್ಞ” ಎಂಬ ಬಿರುದು ಪ್ರದಾನ ಮಾಡಿ ಗೌರವಿಸಿ, ಸನ್ಮಾನಿಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ, 2020-21ನೇ ಸಾಲಿನಲ್ಲಿ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಕನ್ನಡ ವಿಷಯದಲ್ಲಿ ಶೇ. 85 ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ಭಾವಸಾರರ ಸುಮಾರು 35 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಓಂಪ್ರಕಾಶ್ ತೇಲ್ಕರ್, ಸಂತೋಷ್ ಸಾಕ್ರೆ, ನವಲೆ ಶ್ರೀಧರ್ ಮೂರ್ತಿ, ಎಂ.ಕೆ. ಮೋಹನ್, ಗಜೇಂದ್ರನಾಥ್ ಮಾಳೋದೆ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವಸಾರ ಕ್ಷತ್ರಿಯ ಯುವಕ ಸಂಘದ ಅಧ್ಯಕ್ಷ ವಿನಯ್ ತಾಂದಳೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post