ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಮಾಜ ಮತ್ತು ಪತ್ರಿಕೋದ್ಯಮ ಪರಸ್ಪರ ಪೂರಕವಾಗಿ ಸ್ಪಂದಿಸುತ್ತಾ, ಮುಖಾಮುಖಿಯಾಗುತ್ತಾ ಹೋಗುತ್ತದೆ. ಸಮಾಜಕ್ಕೆ ಪತ್ರಿಕೆಗಳು ಸ್ಪಂದಿಸುವ ರೀತಿಯಲ್ಲಿಯೇ ಸಮಾಜ ಕೂಡ ಪತ್ರಿಕಾ ವರದಿಗಳಿಗೆ ಪ್ರತಿಸ್ಪಂದಿಸಬೇಕು. ಮಾಧ್ಯಮ ಸಮಾಜಕ್ಕೆ ಉತ್ತರದಾಯಿತ್ವ ಆಗಿದ್ದು ತಪ್ಪು ಮಾಡಿದರೆ ಸಮಾಜಕ್ಕೆ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಅಭಿಪ್ರಾಯಪಟ್ಟರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ‘ಪತ್ರಿಕೋದ್ಯಮ ಮತ್ತು ಸಮಾಜ’ ವಿಷಯ ಕುರಿತು ಮಾತನಾಡಿದರು.
ಪತ್ರಿಕೆ ಸಮಾಜದ ಕನ್ನಡಿ ಎಂಬ ಮಾತಿದೆ. ಕೇವಲ ಕನ್ನಡಿ ಮಾತ್ರವಲ್ಲ, ಸಮಾಜದ ಅಂಕುಡೊಂಕುಗಳನ್ನು ತೋರಿಸುವ ವ್ಯವಸ್ಥೆ ಕೂಡ. ಇದು ಮಾಧ್ಯಮಗಳ ಜವಾಬ್ದಾರಿ ಕೂಡ. ಸಮಾಜಕ್ಕೆ ಪೂರಕ ಮಾಹಿತಿ,ಸಂದೇಶದ ಜೊತೆಗೆ ಸಲಹೆಗಳನ್ನು ಕೂಡ ಪತ್ರಿಕೆಗಳು ನೀಡಬೇಕು. ಇದು ಸಮಾಜ ಸುವ್ಯವಸ್ಥಿತವಾಗಿ ನಡೆಯಲು ಸುಲಭವಾಗುತ್ತದೆ. ಪ್ರಭುತ್ವವನ್ನು ಕೂಡ ಸರಿದಾರಿಯಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಪತ್ರಿಕೆಗಳು ಸಮಾಜಕ್ಕೆ ಸಂಬಂಧವಿಲ್ಲದ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ವೈಯುಕ್ತಿಕ ಬದುಕಿನಲ್ಲಿ ಇಣುಕಲು ಅಧಿಕಾರವಿಲ್ಲ. ಇದು ಸರಿಯೂ ಅಲ್ಲ. ಅನಿವಾರ್ಯ ಸಂದರ್ಭದಲ್ಲಿ ಪತ್ರಿಕೆಗಳು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಪತ್ರಿಕೆಗಳು ಕೆಲಸ ನಿರ್ವಹಿಸುತ್ತದೆ. ಆದರೆ ಇದರ ನಡುವೆ ಕೆಲವು ದುಷ್ಟ ವ್ಯಕ್ತಿಗಳು ಪತ್ರಿಕೆಗಳ ಹೆಸರಿನಲ್ಲಿ, ಪತ್ರಕರ್ತರ ಸೋಗಿನಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ, ಜನರ ವೈಯುಕ್ತಿಕ ಬದುಕನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ನಡೆಸುತ್ತಿದ್ದಾರೆ. ಇದು ನೈಜ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆ. ಇಂತಹ ಹಳದಿ ಪತ್ರಿಕೋದ್ಯಮದ ಜನರಿಗೆ ಯಾರೂ ಹೆದರಬಾರದು. ಕಾನೂನಿನ ರೀತಿಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಬೇಕು. ನಾವು ವೈಯುಕ್ತಿಕ ಬದುಕಿನಲ್ಲಿ ಶುದ್ಧವಾಗಿದ್ದರೆ ಇಂತಹವರಿಗೆ ಹೆದರಬೇಕಾಗಿಲ್ಲ ಎಂದರು.
ಸ್ವಾತಂತ್ರ್ಯ ಪೂರ್ವ ಮತ್ತು ಬಳಿಕದ ಒಂದರೆಡು ದಶಕಗಳಲ್ಲಿ ಪತ್ರಿಕೆಗಳಲ್ಲಿ ಸೇವಾ ಮನೋಭಾವದಿಂದ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದೊಂದು ವೃತ್ತಿಯಾಗಿದ್ದು, ಸೂಕ್ತ ಆದಾಯವನ್ನು ಕೂಡ ಪತ್ರಕರ್ತರು ನಿರೀಕ್ಷಿಸುತ್ತಾರೆ. ಹೀಗಾಗಿ ಇದು ಉದ್ಯಮದ ಚೌಕಟ್ಟನ್ನು ಪಡೆಯುತ್ತಿದೆ. ಈ ರೀತಿ ಉದ್ಯಮ ಚೌಕಟ್ಟನ್ನು ಪಡೆದು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದರೆ ಪತ್ರಿಕಾ ಸಂಸ್ಥೆ ಆರೋಗ್ಯಕರ ರೀತಿಯಲ್ಲಿ ಬೆಳೆಯುತ್ತವೆ. ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡುವವರು ಕೂಡ ಉತ್ತಮ ಸಂಬಳ ಮತ್ತಿತರ ಸೌಲಭ್ಯ ಪಡೆಯಲು ಸಾಧ್ಯ. ಹೀಗಾಗಿ ಪತ್ರಿಕೆ ಉದ್ಯಮವಾದರೆ ಸಮಸ್ಯೆಯಿಲ್ಲ, ಆದರೆ ಅದು ಎಂದೂ ಪತ್ರಿಕಾ ಕ್ಷೇತ್ರದ ಮೂಲ ಆಶಯವನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಗುತ್ತಿದೆ ಎಂದರು.
ಪತ್ರಿಕೋದ್ಯಮ ಮಾತ್ರವಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಯಡಗೆರೆಯವರ ಸೇವೆ ಇನ್ನಷ್ಟು ಕಾಲ ಬೇಕಾಗಿದೆ. ಇನ್ನಷ್ಟು ಉತ್ತಮ ಸ್ಥಾನ ಪಡೆಯಲಿ ಎಂದು ಆಶಿಸಿದರು.
ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಸತೀಶ್‌ಚಂದ್ರ, ಜಿ. ವಿಜಯ್ ಕುಮಾರ್, ಕಡಿದಾಳ್ ಗೋಪಾಲ್, ವಸಂತ್ ಹೋಬಳಿದಾರ್, ಎಂ.ಪಿ. ನಾಗರಾಜ್, ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಜಯಂತಿ ವಾಲಿ, ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್, ಜಿಲ್ಲಾ ಸಂಪಾದಕಿ ಶಬರಿ ಕಡಿದಾಳ್ ಮತ್ತು ಎಲ್ಲಾ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post