ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೀರಶೈವ ಲಿಂಗಾಯತ ಸಮಾಜದಲ್ಲಿ ಕೆಲವರು ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆಲ್ಲ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ BSYadiyurappa ಹೇಳಿದ್ದಾರೆ.
ನಗರದ ಯಡಿಯೂರಪ್ಪ ಅವರ ನಿವಾಸದ ಬಳಿ ಇಂದು ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಪ್ರಬುದ್ಧ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗದ ಅಭ್ಯರ್ಥಿಯಲ್ಲ. ಬಿ.ಎಸ್. ಯಡಿಯೂರಪ್ಪನೇ ಸಿಎಂ ಅಭ್ಯರ್ಥಿ ಎಂದು ಭಾವಿಸಿ ಮತ ಚಲಾಯಿಸಿ, ಚನ್ನಬಸಪ್ಪ ಅವರ ಗೆಲುವಿಗಾಗಿ ಎಲ್ಲರೂ ಇನ್ನು 15 ದಿನ ಸಮಯ ಕೊಡಿ. ಅವರಿಗೆ ಸೇವೆ ಮಾಡಲು ಅವಕಾಶ ಕೊಟ್ಟರೆ ಐದು ವರ್ಷಗಳ ಕಾಲ ಶಿವಮೊಗ್ಗದ ನಾಗರಿಕರಿಗೆ ನೆಮ್ಮದಿ ಸಿಗುತ್ತದೆ ಎಂದು ಭರವಸೆ ನೀಡಿದರು.

ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ…
ಶಾಸಕ ಕೆ.ಎಸ್. ಈಶ್ವರಪ್ಪ KSEshwarappa ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲ ಸಮಾಜಕ್ಕೂ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ವೀರಶೈವ ಸಮಾಜದ ಎಲ್ಲ ಉಪಪಂಗಡಗಳ ಬೇಡಿಕೆಯನ್ನೂ ಈಡೇರಿಸಿದೆ. ಹಾಗಾಗಿ ಶಿವಮೊಗ್ಗದಲ್ಲಿ ಯಾರೇ ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Also read: ಬಂಗಾರಪ್ಪರ ಹಾದಿಯಲ್ಲಿ ಸಾಗಿ ಜನಪ್ರೀತಿಗಳಿಸುವೆ ಪತ್ರಿಕಾ ಸಂವಾದದಲ್ಲಿ ಮಧು ಬಂಗಾರಪ್ಪ ವಿಶ್ವಾಸ
ಬಿಜೆಪಿ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾದರೆ ಮಾತ್ರ ಶಿವಮೊಗ್ಗದಲ್ಲಿ ನಾವು ಸುರಕ್ಷಿತ ಎಂದು ಅನೇಕರು ಹೇಳುತ್ತಿದ್ದಾರೆ. ಸಮಾಜದ ರಕ್ಷಣೆಗಾದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಿದೆ. ಆ ಮೂಲಕ ಗೋಹತ್ಯೆ, ಮತಾಂತರ, ಲವ್‌ಜಿಹಾದ್ ತಡೆಯಬೇಕಿದೆ. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಾತಿವಾದಿಗಳು. ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯವಾದಿ ಎಂಬುದನ್ನು ವೀರಶೈವ ಸಮಾಜ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಕೇವಲ ಮುಸ್ಲಿಂ ಸಮುದಾಯದ ಮತ ನೆಚ್ಚಿಕೊಂಡಿದೆ. ರಾಷ್ಟ್ರವಾದಿ ಮುಸ್ಲಿಮರು ಎಂದೂ ಬಿಜೆಪಿ ಕೈ ಬಿಡಲ್ಲ. ಸಾವಿರಾರು ಮುಸ್ಲಿಮರಿಗೆ ನಾವು ಕೆಲಸ ಮಾಡಿಕೊಟ್ಟಿದ್ದೇವೆ. ದೇಶದ್ರೋಹಿ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿಕೊಳ್ಳಲಿ ಎಂದು ಹೇಳಿದರು.

ಡಾ. ಧನಂಜಯ ಸರ್ಜಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುಡಿಸಿದರೆ ಕಸ ಇರಬಾರದು, ಬಡಿಸಿದರೆ ಹಸಿವು ಇರಬಾರದು. ವೋಟ್ ಹಾಕಿದರೆ ಕಾಂಗ್ರೆಸ್ಸೇ ಇರಬಾರದು… ಎಂದು ಹೇಳುತ್ತಿದ್ದಂತೆಯೇ ಸಭೆಯಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಪಕ್ಷವೇ ತಾಯಿ ಅಂದವರು ಈಶ್ವರಪ್ಪ. ನಾಯಕರ ಸೂಚನೆ ಮೇರೆಗೆ ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ನೀಡಿ ಆದರ್ಶ ಮೆರೆದವರು ಅವರು. ಪಕ್ಷ ಅಂದರೆ ಸಾಮಾನ್ಯ ಕಾರ್ಯಕರ್ತ. ಸಾಮಾನ್ಯ ಕಾರ್ಯಕರ್ತ ಚನ್ನಬಸಪ್ಪ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸುವ ಮೂಲಕ ನಾವು ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಅವರ ಋಣ ತೀರಿಸಬೇಕಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ, ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪ್ರಮುಖರಾದ ಡಾ.ಧನಂಜಯ ಸರ್ಜಿ, ಬಳ್ಳೇಕೆರೆ ಸಂತೋಷ್, ನಗರ ಪಾಲಿಕೆ ಸದಸ್ಯ ಎಸ್. ಜ್ಞಾನೇಶ್ವರ್ ಮುಂತಾದವರಿದ್ದರು.









Discussion about this post