ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ವಿದ್ಯಾನಗರ ರೈಲ್ವೆ ಮೇಲ್ಸೇತುವೆಯಲ್ಲಿ ಓಮಿನಿ ಮತ್ತು ಸಿಮೆಂಟ್ ಹೊತ್ತ ಲಾರಿ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ 8 ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಗಿನ ಜಾವ ಸುಮಾರು 1 ಗಂಟೆಗೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡವರಲ್ಲಿ 4 ಮಂದಿಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಮೆಂಟ್ ಹೊತ್ತ ಲಾರಿ ಹೊಳೆಹೊನ್ನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದು, ನಂತರ ಸಾಗರದತ್ತ ತೆರಳುತ್ತಿತ್ತು. ಈ ವೇಳೆ ಮುಂದೆ ಸಾಗುತ್ತಿದ್ದ ವಾಹನವನ್ನು ಹಿಂದಕ್ಕೆ ಹಾಕಲು ಪ್ರಯತ್ನಿಸಿದಾಗ ಎದುರಿನಿಂದ ಬಂದ ಓಮಿನಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ಸಂದರ್ಭದಲ್ಲಿ ಓಮಿನಿಯಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದರು. ಸ್ಥಳೀಯ ಮಾಹಿತಿ ಪ್ರಕಾರ, ಆದ್ರಿಮಳೆ ಆರಂಭದ ಹಿನ್ನಲೆಯಲ್ಲಿ ಆಚರಿಸುವ ಹಬ್ಬಕ್ಕಾಗಿ ಕುರಿ ತರಲು ಶಿರಸಿ–ಸಿದ್ದಾಪುರ ಭಾಗದವರು ಚಿತ್ರದುರ್ಗಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಗಾಯಗೊಂಡವರಲ್ಲಿ ಕೃಷ್ಣ ಕೊಲ್ಲೂರು (63) ಅವರಿಗೆ ಕಾಲು ಮುರಿದಿದ್ದು, ದಿವಾಕರ್ (50), ಅಣ್ಣಪ್ಪ (31), ದೇವೇಂದ್ರ (45), ಸುರೇಶ್ (55), ಮಂಜುನಾಥ್ (45), ಈಶ್ವರ್ (43) ಹಾಗೂ ಹೇರಂಬ (41) ಗಾಯಗೊಂಡಿದ್ದಾರೆ.
ಈ ಕುರಿತು ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















