ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನಪ್ಪಿದ ಘಟನೆ ಆನಂದಪುರ ಉಳ್ಳೂರು ಸಮೀಪ ಭಾನುವಾರ ತಡರಾತ್ರಿ ಸಂಭವಿಸಿದೆ.
ಸ್ನೇಹಿತನ ಮನೆಯ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಸ್ನೇಹಿತರು ರಸ್ತೆ ಅಪಘಾತಕ್ಕೆ ಬಲಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಸೊರಬ ತಾಲ್ಲೂಕಿನ ಮಳಲಗದ್ದೆ ಗ್ರಾಮದ ಪವಿತ್ರ ಹಾಗೂ ತಡೆಗಡಲೆ ಗ್ರಾಮದ ವೀರೇಶ್ ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ
ಆನಂದಪುರದಲ್ಲಿ ನಡೆದಿದ್ದ ಸ್ನೇಹಿತನ ಮನೆಯ ಸಮಾರಂಭವೊಂದರಲ್ಲಿ ಭಾಗವಹಿಸಿ, ಇಬ್ಬರೂ ಕಾರಿನಲ್ಲಿ ಸಾಗರದ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸಾಗರದಿಂದ ಆನಂದಪುರದ ಕಡೆಗೆ ಅತಿ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ವಾಹನವು, ಉಳ್ಳೂರು ಸಮೀಪ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು,ಕ್ಯಾಂಟರ್ ಚಾಲಕನ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















