ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಮಾರ್ಚ್ 8 ರಿಂದ 41 ಸರ್ಕಾರಿ ಹಾಗೂ 8 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟ ಹಾಗೂ 45-59 ವರ್ಷದ ಆರೋಗ್ಯ ತೊಂದರೆ ಇರುವ ಫಲಾನುಭವಿಗಳು ತಮ್ಮ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
45-59 ವರ್ಷದವರು ತಮಗೆ ಇರುವ ಕಾಯಿಲೆ ಬಗ್ಗೆ ವೈದ್ಯರಿಂದ ಧೃಡೀಕರಣ ಪತ್ರವನ್ನು ಕಡ್ಡಾಯವಾಗಿ ತರುವುದು. ಮತ್ತು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸಹ ಈ ಕೋವಿಡ್ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು ಎಂದು ಹೇಳಿದ್ದಾರೆ.
ಎಲ್ಲಾ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಇತರೆ ಯಾವುದೇ ಗುರುತಿನ ಚೀಟಿ & ಮೊಬೈಲ್ ತರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತೀ ಡೋಸ್‌ಗೆ 250ರೂ. ಪಾವತಿಸಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದ್ಧಾರೆ.
ಜಿಲ್ಲೆಯ 49 ಕೋವಿಡ್ ಲಸಿಕಾ ಕೇಂದ್ರಗಳು ಆನ್‌ಲೈನ್‌ನಲ್ಲಿ ಪ್ರಚಾರಪಡಿಸಿದ್ದು, ಕೋವಿನ್ ಆಪ್ ಅಥವಾ ಆರೋಗ್ಯಸೇತು ಆಪ್ ಮೂಲಕ ದಾಖಲಿಸಿಕೊಳ್ಳಬಹುದು. ಅಥವಾ ನಿಮ್ಮ ಹತ್ತಿರದ ಆಸ್ಪತ್ರೆಗೆ ತೆರಳಿ ಆನ್ ಸ್ಪಾಟ್ ದಾಖಲಾತಿ ಮಾಡಿಕೊಂಡು ಲಸಿಕೆ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ತುಂಗಾನಗರ ಪ್ರಸೂತಿ ಕೇಂದ್ರದಲ್ಲಿ ಮಹಿಳಾ ಫಲಾನುಭವಿಗಳಿಗೆ ಲಸಿಕೆ ನೀಡಲು ಗುಲಾಬಿ ಬೂತ್ ತೆರೆಯಲಾಗಿದೆ. ಕೋವಿಡ್ ಲಸಿಕೆಯು ತುಂಬಾ ಸುರಕ್ಷಿತವಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡು ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post