ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಪ್ರತಿಷ್ಠಿತ ಪಿಇಎಸ್ ಟ್ರಸ್ಟ್ನ ಸಹಯೋಗದಲ್ಲಿ ವಿಸ್ಡಂ ಇಡಿ ಸಂಸ್ಥೆಯು ಪಿಇಎಸ್ ಪ್ರೇರಣಾ ಕನ್ವೇಷನ್ ಹಾಲ್‌ನಲ್ಲಿ ಡಿ.11ರಂದು ಜಾಗತಿಕ ಉನ್ನತ ಶಿಕ್ಷಣ ಮತ್ತು ಇಂಟರ್ನ್ಶಿಪ್ ಉದ್ಯೋಗ ಮೇಳ-2025ನ್ನು ಆಯೋಜಿಸಲಾಗಿದೆ ಎಂದು ಪಿಇಎಸ್ ಟ್ರಸ್ಟ್ನ ಕುಲಸಚಿವ ಡಾ. ನಾಗರಾಜ್ ಆರ್. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಸ್ಡಂ ಇಡಿ ಸಂಸ್ಥೆಯು ಶೈಕ್ಷಣಿಕ ಮತ್ತು ಕಾರ್ಪೋರೇಟ್ ವೃತ್ತಿಪರರ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ಮತ್ತು ಅವರ ಶೈಕ್ಷಣಿಕ ಪಥದ ನಿಖರತೆ ಮತ್ತು ಕಾಳಜಿಯಿಂದ ಸುಗಮಗೊಳಿಸುವ ಧ್ಯೇಯವನ್ನು ಹೊಂದಿದೆ. ಭಾರತ ಮತ್ತು ವಿದೇಶದಲ್ಲಿರುವ ಪ್ರಮುಖ ಸಂಸ್ಥೆಗಳಿಗೆ ಪ್ರವೇಶ ಮತ್ತು ಅರ್ಹತೆ ಆಧಾರಿತ ವಿದ್ಯಾರ್ಥಿವೇತನವನ್ನು ನೀಡುವಲ್ಲಿ ಬೆಂಬಲವನ್ನು ನೀಡುತ್ತಿದೆ ಎಂದರು.
ಈ ಮೇಳವು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಷ್ಠಿತ ಅಂತರರಾಷ್ಟ್ರೀಯ ಗುಣಮಟ್ಟದ ಸಂಸ್ಥೆಗಳೊಂದಿಗೆ ನೇರವಾಗಿ ಸಂಪರ್ಕವನ್ನು ಸಾಧಿಸಲು ಅನುಕೂಲವಾಗಲಿದೆ. ಇದರಲ್ಲಿ ಯೂರೋಪ್ ಮತ್ತು ಏಷ್ಯಾಖಂಡದ ಸುಮಾರು 15ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಭಾಗವಹಿಸುತ್ತಿವೆ. ಇದುವರೆಗೆ ಬೆಂಗಳೂರು, ಮುಂಬೈ, ಚೆನ್ನೆöÊ, ಮೊದಲಾದ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಇಂತಹ ಮೇಳವು ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಜಾಗತಿಕ ಉನ್ನತ ಶಿಕ್ಷಣ ಮೇಳವೊಂದು ಆಯೋಜನೆಯಾಗುತ್ತಿದೆ ಎಂದರು.
ಈ ಮೇಳದಲ್ಲಿ ಯು.ಕೆ. ಜರ್ಮನಿ, ಹಂಗೇರಿ, ಸ್ವಿಡ್ಜರ್‌ಲ್ಯಾಂಡ್, ಫ್ರಾನ್ಸ್, ಮಾಲ್ಟಾ, ಯುಎಇ, ಬಹರೈನ್ ಮೊದಲಾದ ದೇಶಗಳಿಂದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾಗವಹಿಸಲಿವೆ. ಸ್ನಾತಕೋತ್ತರ ಹಾಗೂ ಸಂಶೋಧನಾ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿವೇತನ, ಪ್ರವೇಶ, ವೀಸಾ ಪ್ರಕ್ರಿಯೆಗಳು ಮತ್ತು ದೀರ್ಘಕಾಲದ ಉದ್ಯೋಗಾವಕಾಶಗಳ ಕುರಿತು ವಿವರ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದ ಅವರು, ಇದರಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಪ್ರವೇಶವಿದ್ದು ಅಂತರಾಷ್ಟ್ರೀಯ ವಿವಿಗಳ ಪ್ರತಿನಿಧಿಗಳೊಂದಿಗೆ ನೇರ ಸಂವಹನ ಮಾಡಬಹುದಾಗಿದೆ. ಜಾಗತಿಕ ಉದ್ಯೋಗಗಳಲ್ಲಿನ ಸವಾಲುಗಳು ಮತ್ತು ವಿದೇಶಗಳಲ್ಲಿನ ಅಧ್ಯಯನ ಅವಕಾಶ ಕುರಿತ ವಿಶೇಷಗೋಷ್ಠಿಗಳು ನಡೆಯಲಿವೆ ಎಂದರು.
ಈ ಮೇಳವು ಐಟಿ, ಉತ್ಪಾದನೆ, ಬ್ಯಾಂಕಿಂಗ್, ಚಿಲ್ಲರೆ ವ್ಯಾಪಾರ, ಆರೋಗ್ಯ ಪಾಲನೆ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಬೆಳೆಸುವುದು, ಉದ್ಯೋಗ ತಯಾರಿ, ಆರ್ಥಿಕ ಸದೃಢತೆ, ಮೊದಲಾದವುಗಳನ್ನು ಬೆಳೆಸಲು ಸಹಾಯಕವಾಗಲಿದೆ.
ಅಭ್ಯರ್ಥಿಗಳು ತಮ್ಮ ಪರಿಚಯ ಪತ್ರ, ಅಂಕಪಟ್ಟಿಗಳು ಹಾಗೂ ಪದವಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ಸಿದ್ಧಪಡಿಸಿಕೊಂಡು ಬರುವಂತೆ ಸೂಚಿಸಿದ ಅವರು, ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲಾಗುವುದು ಎಂದರು.
ಹೆಚ್ಚಿನ ಮಾಹಿತಿಗೆ ಮೊ.: 7022882822ನ್ನು ಸಂಪರ್ಕಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪೆಸಿಟ್‌ಎಂ.ನ ಪ್ರಾಚರ‍್ಯ ಡಾ.ಸ್ವಾಮಿ ಡಿ.ಆರ್., ಪೇಸಿಎಎಂನ ಪ್ರಾಚರ‍್ಯ ಡಾ.ಸುದರ್ಶನ್ ಜಿ.ಎಂ., ವಿಸ್ಡಂ ಇಡಿ ಎಂಡಿ ಡಾ.ಫ್ರಾನ್ಸಿಕಾತೇಜ್, ಸಿಎಓ ಡಾ.ಗುರುತೇಜ್ ಮತ್ತು ಪಾಲುದಾರ ಅನಂತ ನಾಯಕ್ ಕೆ. ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















