ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಹವಾಮಾನಾಧಾರಿತ ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಳ್ಳಲು ನಿಗಧಿಪಡಿಸಿದ ದಿನಾಂಕವನ್ನು ಕೃಷಿಕರ ಹಿತದೃಷ್ಟಿಯಿಂದ ಜುಲೈ 31ರವರೆಗೆ ವಿಸ್ತರಿಸಲು ಕೋರಲಾಗಿದ್ದು, ಸರ್ಕಾರವು ಅವಧಿ ವಿಸ್ತರಿಸುವ ಭರವಸೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದ್ದಾರೆ.
ಅಡಿಕೆ, ಶುಂಠಿ ಹಾಗೂ ಕಾಳುಮೆಣಸು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ ಮಾಡಿಸಲು ಜೂನ್ 30ರವರೆಗೆ ಹಾಗೂ ಮಾವು ಬೆಳೆಗೆ ಜುಲೈ 31ರವರೆಗೆ ನೋಂದಾಯಿಸಿಕೊಳ್ಳಲು ದಿನಾಂಕ ನಿಗಧಿಪಡಿಸಿ ಸರ್ಕಾರವು ಜೂನ್ 25ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ, ಅವಧಿ ವಿಸ್ತರಿಸುವಂತೆ ಮಾಡಿದ ಕೋರಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪರಿಷ್ಕೃತ ಆದೇಶ ಶೀಘ್ರದಲ್ಲಿ ಹೊರಬೀಳಲಿದೆ ಎಂದವರು ತಿಳಿಸಿದ್ದಾರೆ.
ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ರೈತರು ಬೆಳೆವಿಮೆಗೆ ಹೆಸರು ನೋಂದಾಯಿಸಿಕೊಳ್ಳಲು ಎರಡು ದಿನಗಳ ಅತ್ಯಂತ ಕಡಿಮೆ ಕಾಲಾವಾಕಾಶ ಇರುವುದರಿಂದ ಹಾಗೂ ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಸಾಕಷ್ಟು ಸಂಖ್ಯೆಯ ರೈತರಿಗೆ ಹೆಸರು ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ರೈತರ ಅನಾಕೂಲಗಳನ್ನು ಮುಖ್ಯಮಂತ್ರಿಗಳು ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದವರು ತಿಳಿಸಿದ್ದಾರೆ.
ಆದ್ದರಿಂದ ಮಾವು ಸೇರಿದಂತೆ ಎಲ್ಲಾ ತೋಟಗಾರಿಕೆ ಬೆಳೆಗಾರರು ಯಾವುದೇ ಆತಂಕಕ್ಕೆ ಒಳಗಾಗದೆ ನಿಗಧಿಪಡಿಸಲಾಗುವ ದಿನಾಂಕದೊಳಗಾಗಿ ಬೆಳೆ ವಿಮಾ ಕಂತು ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಅರ್ಹ ರೈತರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post