ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಹಕನಿಂದ ಎಂಆರ್’ಪಿ #MRP ದರಕ್ಕಿಂತ ರೂ.24 ಪಡೆದು ಒಂದು ಕೆಜಿ ಚಹಾ ಪುಡಿ ಪೂರೈಸಿದ್ದ ಸಂಸ್ಥೆಗೆ ರೂ.25000 ದಂಡ ವಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಏನಿದು ಪ್ರಕರಣ?
ಶಿವಮೊಗ್ಗದ ನಿವಾಸಿ ಮೆಹಬೂಬ್ ಮುದಸ್ಸಿರ್ ಖಾನ್ ಎನ್ನುವವರು 2024ರ ಜುಲೈ 4ರಂದು ಆನ್’ಲೈನ್’ನಲ್ಲಿ ಒಂದು ಕೆ.ಜಿ ತಾಜಮಹಲ್ ಬ್ರಾಂಡ್ ಚಹಾಪುಡಿ ತರಿಸಿದ್ದು, ಸಾಗಣೆ ವೆಚ್ಚ ರೂ, 41 ಹಾಗೂ ಚಹಾಪುಡಿಗೆ ರೂ, 849 ಸೇರಿ ರೂ.890 ಪಾವತಿಸಿದ್ದಾರೆ. ಆದರೆ ಚಹಾಪುಡಿ ಪೊಟ್ಟಣದ ಮೇಲೆ ಗರಿಷ್ಠ ಮಾರಾಟ ದರ (ಎಂಆರ್’ಪಿ) ರೂ, 825 ಎಂದು ನಮೂದಿಸಿದ್ದು, ಹೆಚ್ಚುವರಿಯಾಗಿ ರೂ.24 ಪಡೆಯಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಫಿಪ್ಕಾರ್ಟ್ ಇಂಟರ್ನೆಟ್ ಪ್ರೈ.ಲಿ ಸಂಸ್ಥೆಯ ಸಿಇಒ, ಹಿರಿಯ ವ್ಯವಸ್ಥಾಪಕರು ಹಾಗೂ ದೆಹಲಿಯ ವಿಜಿ ಫುಡ್ ಮತ್ತು ಕೆಟರರ್ಸ್ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಹೆಚ್ಚಿನ ದರ ಪಡೆದಿರುವ ಬಗ್ಗೆ ಸಂಬಂಧಿಸಿದವರಿಗೆ ಇ-ಮೇಲ್ ಮೂಲಕ ತಿಳಿಸಿದ್ದು, ತಮ್ಮಿಂದ ಪಡೆದಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ಹಿಂದಿರುಗಿಸಲು ತಿಳಿಸಿ ಪತ್ರ ಬರೆದಿದ್ದೇನೆ. ಆ ಪತ್ರಗಳು ಎದುರುದಾರರಿಗೆ ತಲುಪಿದ್ದರೂ ಯಾವುದೇ ಉತ್ತರ ನೀಡಿಲ್ಲ. ಸಮಸ್ಯೆ ಬಗೆಹರಿಸದೇ ಸೇವಾನ್ಯೂನ್ಯತೆ ಎಸಗಿದ್ದಾರೆ ಎಂದು ಮೆಹಬೂಬ್ ಮುದಸ್ಸಿರ್ ಖಾನ್ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರ ಮೊತ್ತ ರೂ.890ಕ್ಕೆ 2024ರ ಸೆ. 19ರಿಂದ ಆಯೋಗದ ಆದೇಶವಾದ 45 ದಿನಗಳ ಒಳಗಾಗಿ ವಾರ್ಷಿಕ ರೂ. 9 ಬಡ್ಡಿಯೊಂದಿಗೆ ಗ್ರಾಹಕನಿಗೆ ಸಂಬಂಧಿಸಿದ ಎದುರುದಾರರು ಹಣ ಹಿಂದಿರುಗಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ. 12ರಂತೆ ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡಬೇಕು.
ಗ್ರಾಹಕನಿಗೆ ಆದ ಮಾನಸಿಕ ಹಿಂಸೆಗೆ ಮತ್ತು ದೂರಿನ ಖರ್ಚು ವೆಚ್ಚಗಳಿಗಾಗಿ ಆದೇಶವಾದ 45 ದಿನಗಳ ಒಳಗಾಗಿ ಎದುರುದಾರರು ರೂ,25,000 ಪಾವತಿಸಬೇಕು. ತಪ್ಪಿದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇ 12ರಷ್ಟು ಬಡ್ಡಿ ಸೇರಿಸಿ ಪಾವತಿಸುವಂತೆ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post