ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬದುಕಿನಲ್ಲಿ ಎಂದಿಗೂ ವಿಚಲಿತರಾಗಬಾರದು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಎಲ್ಲವನ್ನೂ ಧರ‍್ಯವಾಗಿ ಎದುರಿಸುವ ಛಲವನ್ನು ಹೊಂದಬೇಕು. ಅಲ್ಲದೆ ಉನ್ನತ ಸಾಧನೆಯ ಗುರಿಯನ್ನು ಇರಿಸಿಕೊಳ್ಳಬೇಕು ಎಂದು ಮಧುರ ಲೇಡೀಸ್ ಕಾರ್ನರ್ ಮಾಲೀಕರಾದ ಉಮಾ ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಿಇಎಸ್‌ಐಎಎಂಎಸ್ ಕಾಲೇಜಿನಲ್ಲಿ ಸೋದರಿ ನಿವೇದಿತ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ವಿಶೇಷ ಸಾಧಕಿಯರ ಯಶೋಗಾಥೆ ಥಂಡರ್ ಬೋಲ್ಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಯಶೋಗಾಥೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ಆರಂಭದ ದಿನಗಳಲ್ಲಿ ಅವರು ಪಟ್ಟಂತಹ ಪರಿಶ್ರಮ, ಎದುರಿಸಿದಂತಹ ನೋವು, ಸಂಕಟ ಹಾಗೂ ಅವಮಾನಗಳು ಅವೆಲ್ಲವನ್ನು ಮೀರಿ ಸತತವಾದ ಪರಿಶ್ರಮದ ಮೂಲಕ ಅವರು ಸಾಧನೆಯ ಮಾರ್ಗದಲ್ಲಿ ಯಶಸ್ಸನ್ನು ಕಂಡದ್ದನ್ನು ವಿವರಿಸಿದರು.
ಇನ್ನೋರ್ವ ಮಹಿಳಾ ಸಾಧಕರಾದ ಸಾಗರದ ಸಮೀಪದ ಭೀಮನಕೋಣೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿರುವ ಚೈತನ್ಯ ವಿಶೇಷ ಶಿಕ್ಷಣ ಶಾಲೆಯ ಸ್ಥಾಪಕರಾದ ಶಾಂತಲಾ ಸುರೇಶ್ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಅಲ್ಲದೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಛಲವನ್ನು ಇರಿಸಿಕೊಂಡು ವಿಶೇಷ ಚೇತನ ಮಕ್ಕಳಿಗಾಗಿಯೇ ಒಂದು ಶಾಲೆಯನ್ನು ನಿರ್ಮಿಸಿ ಆ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿರುವ ತಮ್ಮ ಯಶಸ್ಸಿನ ಹಾದಿಯ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಅಲ್ಲದೇ ಈ ರೀತಿಯ ಮಕ್ಕಳಿಗೆ ಅನುಕಂಪಕ್ಕಿಿಂತ ಸಹಾಯ ಮತ್ತು ಮಾರ್ಗದರ್ಶನದ ಅಗತ್ಯವಿರುತ್ತದೆ. ಕೇವಲ ಮೂರು ಮಕ್ಕಳಿಂದ ಆರಂಭಗೊಂಡ ಈ ಪಯಣ ಇಂದು 62 ಮಕ್ಕಳನ್ನು ಒಗ್ಗೂಡಿಸಿಕೊಂಡು ಅವರಿಗೆ ವಿಶೇಷ ಮಾರ್ಗದರ್ಶನವನ್ನು ನೀಡುತ್ತಾ ಬಂದತಮ್ಮ ಬದುಕಿನ ಪಯಣವನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ. ಸುದರ್ಶನ್, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಡಾ.ಎಸ್.ಡಿ. ದಿಲೀಪ್ ಕುಮಾರ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ಮಂಜುನಾಥ್, ಡಾ. ಟಿ.ಡಿ. ನಾಗರಾಜ್ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















