ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ High Court bench ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ KWJ ಜಿಲ್ಲಾ ಘಟಕ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಇಂದು ಧರಣಿಯಲ್ಲಿ ಪಾಲ್ಗೊಂಡಿತ್ತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯು.ಹೆಚ್. ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ರಾಜ್ಯ ಸಂಘದ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ದೇಶಾದ್ರಿ ಹೊಸಮನಿ, ಟಿ.ಸತ್ಯನಾರಾಯಣ್, ಪತ್ರಕರ್ತರಾದ ಜಿ.ಟಿ. ಸತೀಶ್, ಡಾ. ಬಾಲಕೃಷ್ಣ ಹೆಗಡೆ ಮಾತನಾಡಿ, ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ
ಪ್ರತಿಭಟನಾ ಸಭೆಯ ನಂತರ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಪತ್ರಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಮಧ್ಯ ಕರ್ನಾಟಕದ ಪ್ರಮುಖ ಸ್ಥಳವಾಗಿದ್ದು, ಸುತ್ತಮುತ್ತಲಿನ ಜಿಲ್ಲೆಗಳಿಗೆ ಕೇಂದ್ರಸ್ಥಾನವಾಗಿದೆ. ಈಗಾಗಲೇ ಇಲ್ಲಿ ವಿವಿಧ ಬಗೆಯ 18 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುತ್ತದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದ್ದುದಲ್ಲದೇ ಆ ಪೀಠಕ್ಕೆ ಶಿವಮೊಗ್ಗವನ್ನೂ ಸೇರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರ್ಪಡೆಯಾದರೆ ಮಧ್ಯ ಕರ್ನಾಟಕದಿಂದ ಮಂಗಳೂರಿಗೆ ಸರಿಯಾದ ರಸ್ತೆ ಸಂಪರ್ಕವಾಗಲಿ, ಸಂಚಾರ ಸೌಲಭ್ಯವಾಗಲಿ ಇಲ್ಲದಿರುವ ಕಾರಣ ಇಲ್ಲಿನ ಕಕ್ಷಿದಾರರಿಗೆ, ಸಾರ್ವಜನಿಕರಿಗೆ ಮಂಗಳೂರಿಗೆ ಹೋಗಿ ಬರಲು ಇನ್ನಿಲ್ಲದ ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಹೈಕೋರ್ಟ್ ಪೀಠವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸುವುದು ಒಳಿತು ಎಂದು ಅಭಿಪ್ರಾಯಪಟ್ಟವರು.
Also read: ಹೈಕೋರ್ಟ್ ಸಂಚಾರ ಪೀಠ ಸ್ಥಾಪನೆಗೆ ಡಿ. ಮಂಜುನಾಥ್ ಒತ್ತಾಯ
ಶಿವಮೊಗ್ಗ ನ್ಯಾಯಾಲಯ ಈಗಾಗಲೇ ಶತಮಾನೋತ್ತರ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿದ್ದು, ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಪ್ರಕರಣಗಳ ಸಂಖ್ಯೆ ಈ ನ್ಯಾಯಾಲಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಲಿ ಬೆಂಗಳೂರಿನ ಹೈಕೋರ್ಟ್‍ನಲ್ಲಿ ಶಿವಮೊಗ್ಗದ ವಕೀಲರ ಸಂಖ್ಯೆಯೂ ಹೆಚ್ಚಿದೆ. ಈ ಭಾಗದ ಎಲ್ಲಾ ಪ್ರಕರಣಗಳನ್ನು ಹೆಚ್ಚಾಗಿ ಇವರೇ ನೋಡಿಕೊಳ್ಳುತ್ತಿದ್ದು, ಮಂಗಳೂರಿನ ಪೀಠಕ್ಕೆ ಶಿವಮೊಗ್ಗವನ್ನು ಸೇರಿಸಿದರೆ ಇಲ್ಲಿಯ ವಕೀಲರೇ ಮಂಗಳೂರಿಗೆ ತೆರಳಿ ಪ್ರಕರಣ ನಡೆಸುವುದು ದುಸ್ತರವಾಗುತ್ತದೆ. ಆದುದರಿಂದ ಮಂಗಳೂರಿನಲ್ಲಿ ಸ್ಥಾಪಿತವಾಗುವ ಹೈಕೋರ್ಟ್ ಪೀಠಕ್ಕೆ ಶಿವಮೊಗ್ಗವನ್ನು ಸೇರಿಸುವುದನ್ನು ನಾವು ವಿರೋಧಿಸುತ್ತೇವೆ. ಹೈಕೋರ್ಟ್ ಪೀಠ ಶಿವಮೊಗ್ಗದಲ್ಲೇ ಸ್ಥಾಪನೆಯಾಗುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಉಚ್ಛ ನ್ಯಾಯಾಲಯ ಕ್ರಮ ವಹಿಸಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ನಾಗರಾಜ್ ಶೆಣೈ, ಆರುಂಡಿ ಶ್ರೀನಿವಾಸ್, ಗಾರಾ ಶ್ರೀನಿವಾಸ್, ನವೀನ್ ಬಿಲ್ಗುಣಿ, ಸತೀಶ್, ಶ್ರಿಕಾಂತ್, ಸುರೇಶ್ ಸುದರ್ಶನ್, ಸ್ಪಂದನ ಚಂದ್ರು, ಶಿವಮೊಗ್ಗ ಯೋಗರಾಜ್, ವಿಜಯ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Comments 1