ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಸಿಸಿ ಬ್ಯಾಂಕಿನ #DCC Bank ಇತಿಹಾಸದಲ್ಲಿಯೇ 2024-25ನೇ ಸಾಲಿನಲ್ಲಿ 36.75 ಕೋಟಿ ರೂ. ಲಾಭಗಳಿಸಿದೆ ಮುಂದಿನ ಬಾರಿ 45 ಕೋಟಿ ರೂ. ಲಾಭ ಮಾಡುವ ಯೋಜನೆ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ #R M Manjunath Gowda ಹೇಳಿದರು.
ಅವರು ಇಂದು ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್ ಸ್ಥಾಪನೆಗೊಂಡು 72 ವರ್ಷ ಕಳೆದಿದ್ದು, 73ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಬ್ಯಾಂಕಿನ ಇತಿಹಾಸದಲ್ಲಿಯೇ ಅತೀ ಹೆಚ್ಚು ಲಾಭ ಗಳಿಸಿದ ಕೀರ್ತಿ ನಮಗಿದೆ. ಇದನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಿಸಲಾಗುವುದು. ಇದರ ಜೊತೆಗೆ ಅಪೆಕ್ಸ್ ಬ್ಯಾಂಕ್ ಪ್ರಧಾನ ಮಾಡುವ ಉತ್ತಮ ಡಿಸಿಸಿ ಬ್ಯಾಂಕ್ ಪ್ರಶಸ್ತಿಯನ್ನು ನಾವು ಪಡೆದುಕೊಂಡಿದ್ದೇವೆ. ಈಗಾಗಲೇ ಈ ಪ್ರಶಸ್ತಿಯನ್ನು ಆಗಸ್ಟ್ ತಿಂಗಳಲ್ಲಿಯೇ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೀಡಲಾಗಿದೆ. ಇದಕ್ಕೆ ಬ್ಯಾಂಕಿನ ಎಲ್ಲಾ ಸದಸ್ಯರ, ಗ್ರಾಹಕರೇ ಕಾರಣರಾಗಿದ್ದಾರೆ ಎಂದರು.

ನಬಾರ್ಡಿನ ಪುನರ್ಧನ ಸೌಲಭ್ಯ ಈಗಾಗಲೇ ಸಾಕಷ್ಟು ಕಡಿತಗೊಂಡಿದೆ. ಕೇವಲ ಶೇ.10ರಷ್ಟು ಮಾತ್ರ ನೀಡಲಾಗುತ್ತಿದೆ. ಅದನ್ನೂ ನಿಲ್ಲಿಸಬಹುದಾಗಿದೆ. ಹಾಗಾಗಿ ಜಿಲ್ಲಾ ಬ್ಯಾಂಕುಗಳು ಸ್ವಯತ್ತತೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ ಇದರ ಮಧ್ಯೆಯೂ ಕೂಡ 10,85,00 ರೈತರಿಗೆ 1206.60 ಕೋಟಿ ಬೆಳೆ ಸಾಲ ನೀಡಲಾಗಿದೆ. ರೈತರ ಸಾಲಕ್ಕೆ ಈಗ ಹೊಸದಾಗಿ ಯೋಜನೆಯೊಂದನ್ನು ರೂಪಿಸಿದ್ದು, 1 ಲಕ್ಷ ರೂ. ಸಾಲಕ್ಕೆ 720 ರೂ. ವಿಮೆ ಕಟ್ಟಬೇಕು. ಆಕಸ್ಮಾತ್ ಸಾಲ ಪಡೆದವರು ತೀರಿಹೋದರೆ ಈ ಸಾಲ ಕಟ್ಟುವ ಅವಶ್ಯಕತೆ ಇಲ್ಲ. ವಿಮೆ ಇಲ್ಲದಿದ್ದರೆ ಅವರ ಮನೆಯವರು ಕಟ್ಟಬೇಕಾಗುತ್ತಿತ್ತು. ಈ ವಿಮಾ ಯೋಜನೆ ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದರು.

ಆಧುನಿಕತೆಗೆ ತಕ್ಕಂತೆ ಬ್ಯಾಂಕಿನ ವ್ಯವಹಾರಗಳು ಕೂಡ ಬದಲಾವಣೆಯಾಗುತ್ತಿದ್ದು, ಇದೀಗ ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯನ್ನು ಮುಟ್ಟಿಸಲಾಗುವುದು. ಇದಕ್ಕಾಗಿ ಮೊಬೈಲ್ ವ್ಯಾನ್‍ನಲ್ಲಿ ಎಟಿಎಂ ಬಳಸಲಾಗಿದೆ. ಈ ವ್ಯಾನ್ ಹಳ್ಳಿಗಳಲ್ಲಿ ಸಂಚರಿಸುತ್ತದೆ. ಒಂದು ವ್ಯಾನಿನ ಜೊತೆಗೆ ಈಗ ಮತ್ತೊಂದು ವ್ಯಾನನ್ನು ನೀಡಲಾಗುವುದು. ಇದರ ಜೊತೆಗೆ ಬ್ಯಾಂಕಿಂಗ್ ಮೊಬೈಲ್ ಆ್ಯಪನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ಗ್ರಾಹಕರು ತಮ್ಮ ವ್ಯವಹಾರಗಳನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಮಾಡಬಹುದಾಗಿದೆ. ಇದರ ಜೊತೆಗೆ ನೆಫ್ಟ್ ಮತ್ತು ಆರ್‍ಟಿಜಿಎಸ್ ವ್ಯವಹಾರಗಳನ್ನು ಕೂಡ ಮಾಡಬಹುದಾಗಿದೆ ಎಂದರು.

ಸರ್ಕಾರದ ಏಳನೇ ವೇತನ ಆಯೋಗವನ್ನು ಮೊದಲಬಾರಿಗೆ ಡಿಸಿಸಿ ಬ್ಯಾಂಕಿನ ನೌಕರರಿಗೆ ಜಾರಿ ಮಾಡಲಾಗಿದೆ. ಹಾಗಾಗಿ ಸರ್ಕಾರದ ಉದ್ದೇಶವನ್ನು ಕೂಡ ನಾವು ಈಡೇರಿಸುತ್ತಿದ್ದೇವೆ. ಇದರ ಜೊತೆಗೆ ಸರ್ಕಾರದ ಷೇರುಗಳನ್ನು ಕೂಡ ವಾಪಾಸ್ಸು ಮಾಡಲಾಗುವುದು. ಸರ್ಕಾರದ ಹಸ್ತಕ್ಷೇಪ ಸಹಕಾರಿ ಕ್ಷೇತ್ರಕ್ಕೆ ಇರಬಾರದು ಎಂಬ ಉದ್ದೇಶ ನಮ್ಮದು ಎಂದರು.
ಬ್ಯಾಂಕಿನ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ಸೆ.10ರಂದು ಬಂಜಾರ ಭವನದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಉತ್ತಮ ಸಹಕಾರ ಸಂಘಗಳನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರುಗಳಾದ ಮಹಾಲಿಂಗಶಾಸ್ತ್ರೀ, ಜಿ.ಎನ್. ಸುಧೀರ್, ಬಸವರಾಜ್, ಕೆ.ಪಿ. ದುಗ್ಗಪ್ಪಗೌಡರು, ಚಂದ್ರಶೇಖರ್, ಪರಮೇಶ್ವರ್, ಹೆಚ್.ಎಸ್. ರವೀಂದ್ರ, ಕೆ.ಪಿ. ರುದ್ರೇಗೌಡ, ಎಂ.ಡಿ. ರಾಜಣ್ಣರೆಡ್ಡಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post