ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೀವನದಲ್ಲಿ ಹಾಸ್ಯ ಅತ್ಯವಶ್ಯಕ, ವಿಶೇಷವಾಗಿ ಗಂಡ–ಹೆಂಡತಿಯರ ದಿನನಿತ್ಯದ ಸಂಭಾಷಣೆ, ಉತ್ತರ ಕರ್ನಾಟಕದ ನೈಜ ಹಾಸ್ಯ, ಜನಜೀವನದ ಅನುಭವಗಳಲ್ಲಿ ಹುಟ್ಟುವ ಸವಿನಯ ಕ್ಷಣಗಳು—ಇವ್ಯಾವುದೇ ಆಗಿರಲಿ, ನಗು ಎಂದರೆ ಮಾನವನ ಮನಸ್ಸಿಗೆ ಪ್ರಕೃತಿಯೇ ಕೊಟ್ಟ ಔಷಧಿ ಎಂದು ಖ್ಯಾತ ಲೇಖಕಿ ಹಾಗೂ ಪ್ರಾಧ್ಯಾಪಕಿ ಪ್ರೊಫೆಸರ್ ಕಿರಣ್ ದೇಸಾಯಿ ಅವರು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ಗುರುವಾರ ಸಂಜೆ ನಡೆದ ವಾರ ಸಭೆಯಲ್ಲಿ “ವೈಯಕ್ತಿಕ ಜೀವನದಲ್ಲಿ ಹಾಸ್ಯ” ಎಂಬ ವಿಷಯದ ಮೇಲೆ ಅವರು ಅತಿಥಿಯಾಗಿ ಉಪನ್ಯಾಸ ನೀಡಿದರು.
ದಿನನಿತ್ಯ ಜೀವನದಲ್ಲಿನ ಸಣ್ಣ–ಸಣ್ಣ ಅಸಮಾಧಾನಗಳು, ಗೊಂದಲಗಳು, ಕುಟುಂಬದಲ್ಲಿನ ತಮಾಷೆಗಳು—ಇವುಗಳನ್ನು ಒಮ್ಮೆ ಹಾಸ್ಯಕ್ಕೆ ತಿರುಗಿಸಿ ನೋಡಿದರೆ, ಮನಸ್ಸು ಹಗುರವಾಗುತ್ತದೆ ಮತ್ತು ಆರೋಗ್ಯ ಸುಧೃಢವಾಗುತ್ತದೆ ಎಂದು ಅವರು ತಿಳಿಸಿದರು. “ಹಾಸ್ಯ ಕಲಿತರೆ ಜೀವನವೇ ಹಗುರವಾಗುತ್ತದೆ” ಎಂಬ ಸಂದೇಶವನ್ನು ಅವರು ನೇರ, ಸರಳ ಮತ್ತು ಮನರಂಜನಾತ್ಮಕ ಶೈಲಿಯಲ್ಲಿ ಪ್ರೇಕ್ಷಕರಿಗೆ ತಿಳಿಸಿದರು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಅಧ್ಯಕ್ಷ ರೋ. ಹರ್ಷ ಭಾಸ್ಕರ್ ಕಾಮತ್ ನೆರವೇರಿಸಿದರು. ವೇದಿಕೆಯಲ್ಲಿ ಕಾಂತೇಶ್ ಕದ್ರಮಂಡಲಗಿ, ಜಿ ನ್ ನ್ ಮೂರ್ತಿ, ರೋ. ಆರ್.ಎನ್. ಮಂಜುನಾಥ್, ಉಜ್ವಲ ರವಿ, ಶಿಲ್ಪ ಹೆಚ್‌ಜಿ, ಪವಿತ್ರ ಕಾಮತ್ ಹಾಗೂ ಪ್ರೀತಿ ದೀಪಕ್ ಸಾರಥಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬಂದ ಎಲ್ಲ ರೋಟರಿಯನ್ಸ್ ಹಾಗೂ ಕುಟುಂಬ ಸದಸ್ಯರು ಉಪನ್ಯಾಸವನ್ನು ಆಸಕ್ತಿಯಿಂದ ಆಲಿಸಿ, ನಗುವಿನ ಮೂಲಕ ಬದುಕನ್ನು ಸುಂದರಗೊಳಿಸುವ ಸಂದೇಶವನ್ನು ಹೃದಯಂಗಮ ಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















