ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವಿದೆ. ಚುನಾವಣೆ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ #B Y Raghavendra ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಅನೇಕ ವಿಶೇಷತೆಗಳಿಂದ ಕೂಡಿತ್ತು. ವಿಕಸಿತ ಭಾರತಕ್ಕೋಸ್ಕರ ಮತದಾನ ಮಾಡಿದ ಮತದಾರರಿಗೆ ಧನ್ಯಾದಗಳನ್ನು ಸಲ್ಲಿಸುತ್ತೇನೆ ಎಂದರು.
ಒಂದು ದಶಕದಿಂದ ಇಡೀ ವಿಶ್ವವೇ ಬೆರಗಾಗುವಂತೆ ದೇಶಕ್ಕೆ ಶಕ್ತಿಯುತ ಹಾಗೂ ಅಭಿವೃದ್ಧಿ ಮಾಡಿ ವಿಶ್ವಕೇಂದ್ರವನ್ನಾಗಿ ಮಾಡಲು ಮತ್ತೊಮ್ಮೆ ಮೋದಿ #Modi ಸರ್ಕಾರ ಘೋಷಣೆಯಡಿ ಸಹಕಾರ ನೀಡಲು ಕೈ ಜೋಡಿಸಿದ್ದಕ್ಕಾಗಿ ಮತ್ತೊಮ್ಮೆ ಮತದಾರರಿಗೆ ಕೃತಜ್ಞತೆಗಳು ಎಂದರು.
ಭಾರತದ ಏಳಿಗೆಗೆ ಶ್ರಮ ವಹಿಸಿದ ಸಂಘಟನೆ ಕಾರ್ಯಕರ್ತರಿಗೆ ಅಭಿನಂದನೆಗಳು. 1952ರಿಂದ 2024ರವರೆಗೆ ಒಟ್ಟು 18 ಬಾರಿ ಲೋಕಸಭೆ ಚುನಾವಣೆಗಳು ನಡೆದಿದ್ದು 1952ರಲ್ಲಿ ಶೇ. 75.14 ರಷ್ಟು ಮತದಾನವಾಗಿದ್ದನ್ನು ಬಿಟ್ಟರೆ 2024ರ ಚುನಾವಣೆಯಲ್ಲಿ ಶೇ. 78.31ರಷ್ಟು ಮತದಾನವಾಗಿರುವುದು ದಾಖಲೆಯಾಗಿದೆ ಎಂದರು.
ಶಾಂತಿಯುತವಾಗಿ ಮತದಾನವಾಗಲು ಕಾರ್ಯಕರ್ತರು ಸಂಘಟನಾತ್ಮಕವಾಗಿ ಹಾಗೂ ಕುಟುಂಬದ ರೀತಿಯಲ್ಲಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ. ಅದೇ ರೀತಿ ಮೈತ್ರಿಕೂಟದ ಜೆಡಿಎಸ್ ಪಕ್ಷದ ಶ್ರಮ, ಕೆಲವು ಎನ್.ಜಿ.ಒ.ಗಳು ಸಹ ಕೈಜೋಡಿಸಿವೆ. ಹೊರ ದೇಶ, ವಿವಿಧ ರಾಜ್ಯಗಳು ಹಾಗೂ ರಾಜ್ಯದ ವಿವಿಧೆಡೆ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ಸಹ ಮತದಾನ ಮಾಡಿರುವುದರಿಂದ ಶೇಕಡವಾರು ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ವಿವಿಧ ಮೋರ್ಚಾಗಳು, ಮಹಾ ಶಕ್ತಿ ಕೇಂದ್ರ, ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಸಭೆಗಳನ್ನು ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಭೆಗಳು ನಡೆದಿವೆ. ಪರಿವಾರ ಶಕ್ತಿ ತುಂಬಿದೆ. ಎಲ್ಲಿಯೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಹಾಗೂ ಮೋದಿಜೀಯವರ ಗ್ಯಾರಂಟಿ, ಹಿಂದುತ್ವ, ದೇಶದ ರಕ್ಷಣೆ ನೋಡಿ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ ಎಂದರು.
ಈಶ್ವರಪ್ಪನವರು #Eshwarappa ನೆನ್ನೆ ನನ್ನ ಬಗ್ಗೆ ದೂರು ನೀಡಿದ ವಿಷಯ ತಿಳಿಯಿತು. ನಾನು ಆಗ ಆನಂದಪುರದಲ್ಲಿದ್ದೆ ನನಗೆ ಆಶ್ಚರ್ಯವಾಯಿತು. ಇದನ್ನು ನಾನು ಕೂಡಲೇ ಪರಿಶೀಲನೆ ಮಾಡಿದೆ, ಇದು ಸುಳ್ಳು ಸುದ್ಧಿಯಾಗಿದ್ದು, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ನಿರಾಧರವಾದ ಆರೋಪವಾಗಿದೆ ಎಂದರು.
Also read: ಪೆನ್ ಡ್ರೈವ್ ಹಗರಣ ಕಾಂಗ್ರೆಸ್ ನವರ ಇನ್ನೊಂದು ಮುಖ: ಬಂಡೆಪ್ಪ ಖಾಶೆಂಪುರ್
ಒಟ್ಟಾರೆಯಾಗಿ ನನಗೆ ಬಂದ ಮಾಹಿತಿ ಪ್ರಕಾರ ಕಳೆದ ಬಾರಿಗಿಂತ ಹೆಚ್ಚಿನ ಮತದ ಅಂತರದಿಂದ ಶಿವಮೊಗ್ಗದಲ್ಲಿ ಗೆಲ್ಲತ್ತೇನೆ. ರಾಜ್ಯದಲ್ಲಿ ಕೂಡ 25ಕ್ಕೂ ಹೆಚ್ಚಿನ ಸ್ಥಾನ ಬಿಜೆಪಿ ಮೈತ್ರಿಕೂಟಕ್ಕೆ ಬರಲಿದೆ. ಈ ಚುನಾವಣೆಯಲ್ಲಿ ದೇಶ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಸಹಕಾರ ನೀಡಿದ್ದಾರೆ. ಅವರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಪ್ರಧಾನಿ ಮೋದಿಯವರಿಂದ ಪ್ರಾರಂಭವಾದ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷ ನಡ್ಡಜೀ, ಅಣ್ಣಾಮಲೈ, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್, ಬಿ.ವೈ.ವಿಜಯೇಂದ್ರ, ನಟಿ ತಾರಾ, ಶೃತಿ, ಲೋಕಸಭಾ ಉಸ್ತುವಾರಿಯಾಗಿ ರಘುಪತಿಭಟ್, ರಾಷ್ಟ್ರೀಯ ಕಾರ್ಯದರ್ಶಿ ರಾಧಮೋಹನ್‍ದಾಸ್ ಅಗರ್‍ವಾಲ್, ಮೈಸೂರು ಕ್ಷೇತ್ರದ ಶಾಸಕರು ಮತ್ತು ಚಾಮರಾಜ್ ನಗರದ ಅಭ್ಯರ್ಥಿ ಬಾಲರಾಜ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಪ್ರಚಾರ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಶಾಸಕರಾದ ಎಂ.ಬಿ. ಭಾನುಪ್ರಕಾಶ್, ಕೆ.ಬಿ. ಅಶೋಕ್ ನಾಯ್ಕ್, ಪ್ರಮುಖರಾದ ಎಸ್. ಜ್ಞಾನೇಶ್ವರ್, ಎಸ್. ದತ್ತಾತ್ರಿ, ರಾಜಶೇಖರ್, ಸಿ.ಹೆಚ್. ಮಾಲತೇಶ್, ಎನ್.ಜೆ. ರಾಜಶೇಖರ್, ಶಿವರಾಜ್ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post