ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಚುನಾವಣೆ ಬಳಿಕ ಬಿಜೆಪಿಯಲ್ಲಿ ಶುದ್ಧೀಕರಣವಾಗಲಿದ್ದು, ನಿಮ್ಮೆಲ್ಲರ ಆರ್ಶೀವಾದ ಸಿಕ್ಕರೆ, ದೇವರ ಆರ್ಶೀವಾದವೇ ಸಿಕ್ಕ ಹಾಗೆ ಎಂದು ವಿಪ್ರ ಮಹಿಳೆಯರಿಗೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ಮನವಿ ಮಾಡಿದರು.
ನಗರದಲ್ಲಿ ವಿಪ್ರ ಮಹಿಳೆಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ಬಿಜೆಪಿಯಲ್ಲಿ ಶುದ್ದೀಕರಣ ಆಗುತ್ತಿದೆ. ಹಿಂದುತ್ವ ಪರವಾಗಿರುವವರು ನನಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಅನೇಕರಿಗೆ ಇನ್ನೂ ನನ್ನ ಚಿಹ್ನೆ ಕಮಲ ಎಂದುಕೊಂಡಿದ್ದಾರೆ. ಬಿಜೆಪಿಯಿಂದ ನನ್ನ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಚುನಾವಣೆಯಲ್ಲಿ ನನ್ನ ಚಿಹ್ನೆ ಕಮಲ ಅಲ್ಲ. ಕಬ್ಬಿನ ಜಲ್ಲೆ ಜೊತೆ ನಿಂತಿರುವ ರೈತ ಚಿಹ್ನೆ ನನ್ನದು. ರೈತನ ಚಿಹ್ನೆ ಸಿಕ್ಕಿರುವುದು ತುಂಬಾನೇ ಸಂತೋಷವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಸಿಕ್ಕರೆ ದೇವರ ಆಶೀರ್ವಾದ ಸಿಕ್ಕಂಗೆ. ಇದು ನನ್ನ ಕೊನೆ ಚುನಾವಣೆ, ನಾನು ಯಾವತ್ತು ಕಾಂಗ್ರೆಸ್ಗೆ ಹೋಗಲ್ಲ. ನನ್ನ ಚಿಹ್ನೆ ರೈತ ಎಂದು ತಿಳಿಸಿ ನನ್ನ ಪರ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.
ಈಗೆಲ್ಲಾ ವೈಯಕ್ತಿಕ ತೀರ್ಮಾನ
ಹಿಂದೆ ಬಿಜೆಪಿಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿದ್ದರೂ ಎಲ್ಲರೂ ಒಟ್ಟಿಗೆ ಕೂತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ನಾನು ರಾಜ್ಯಾಧ್ಯಕ್ಷನಾಗಿನಿಂದಲೂ ಯಾವುದೇ ಕಾರ್ಯಕ್ರಮ ಇರಲಿ, ಟಿಕೆಟ್ ವಿಚಾರ ಬಂದಾಗಲೂ ಇದೇ ರೀತಿ ಎಲ್ಲರೂ ಕೂತು ಚರ್ಚೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರಕ್ಕೆ ಕೊಡುತ್ತಿದ್ದೇವು. ಎಂದೂ ಕೂಡ ವೈಯಕ್ತಿಕ ತೀರ್ಮಾನ ತೆಗೆದಿಕೊಳ್ಳುತ್ತಿರಲಿಲ್ಲ ಎಂದರು.
ವಿಧಾನಸಭೆಯಲ್ಲೂ ರಾಜ್ಯದ 224 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಅಧ್ಯಯನ ನಡೆಸಿ ಅಭ್ಯರ್ಥಿಗಳ ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದೇವು. ಅಟಲ್ ಜೀ, ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲೆ ಅವರು ನಾವು ತೆಗೆದುಕೊಂಡ ಹೋದ ಪಟ್ಟಿಗೆ 5 ನಿಮಿಷದಲ್ಲಿ ಟಿಕ್ ಮಾಡಿ ಪಟ್ಟಿ ಕೊಡುತ್ತಿದ್ದರು. ಈ ಪದ್ದತಿ ಬಿಜೆಪಿಯಲ್ಲಿ ಇತ್ತು. ಆದರೆ, ಈಗ ಯಾರು ಬೇಕಾದರೂ ಯಾರಿಗೆ ಬೇಕೋ ಅವರಿಗೆ ಟಿಕೆಟ್ ಕೊಡಬಹುದು ಎಂದರು.
Also read: ಶಿವಮೊಗ್ಗ | ಮನೆಯಿಂದಲೇ ಮತದಾನ ಆರಂಭ | ಮೊದಲು ಪೋಸ್ಟಲ್ ವೋಟ್ ಮಾಡಿದ್ದು ಯಾರು?
ಸಿ.ಟಿ. ರವಿ #C T Ravi ಮಂತ್ರಿಯಾಗಿದ್ದಾಗ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಕೆಲಸ ಮಾಡಿ ಎಂದು ಪಕ್ಷದಿಂದ ಕರೆ ಬಂತು. ಅವರು ಕೂಡಲೇ ರಾಜೀನಾಮೆ ಕೊಟ್ಟು ಕಾಲಿಗೆ ಚಕ್ರಕಟ್ಟಿಕೊಂಡು ಎಲ್ಲ ಕಡೆ ತಿರುಗಿದರು. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿಗೆ ಬಿಟ್ಟು ಶೋಭಾಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ #Yadiyurappa ಪ್ರಯತ್ನ ಮಾಡಿದರೂ ಅಲ್ಲಿಯ ಜನ ಕೋ ಬ್ಯಾಕ್ ಶೋಭಾ ಎಂದು ಪ್ರತಿಭಟನೆ ಮಾಡಿದಾಗ ಶೋಭಾ ಸೋಲುತ್ತಾರೆ ಎಂದು ಗೊತ್ತಾದ ಬಳಿಕ ಬೆಂಗಳೂರು ಉತ್ತರ ಕ್ಷೇತ್ರ ಸದಾನಂದ ಗೌಡ ಅವರಿಗೆ ಬಿಟ್ಟು ಶೋಭಾಗೆ ಟಿಕೆಟ್ ಕೊಡಿಸಿದರು. ಹೀಗೆ ಯಾರನ್ನು ಕೇಳದೇ ಯಾರಿಗೆ ಬೇಕಾದರೂ ಟಿಕೆಟ್ ಹಂಚಿಕೆ ಮಾಡಿದರು ಎಂದು ದೂರಿದರು.
ರಾಜ್ಯದಲ್ಲಿ ಹಿಂದುತ್ವ ನಾಯಕರನ್ನು ತುಳಿಯುವ ಪ್ರಯತ್ನದ ಬಳಿಕ ಎಲ್ಲರೂ ನನಗೆ ಕರೆ ಮಾಡಲು ಶುರು ಮಾಡಿದರು. ಕೊನೆ ಈ ವ್ಯವಸ್ಥೆಯನ್ನು ಸರಿ ಮಾಡಬೇಕು ಎಂದು ತೀರ್ಮಾನ ಮಾಡಿ ಚುನಾವಣೆಗೆ ನಿಲ್ಲಬೇಕು ಎಂದು ನಿರ್ಧರಿಸಿದಾಗ ಈಶ್ವರಪ್ಪ ಹೈಕಮಾಂಡ್’ಗೆ ಸೂಚನೆ ಬಂದರೆ ಸ್ಪರ್ಧೆ ಮಾಡಲ್ಲ ಎಂಬ ಭಾವನ ಎಲ್ಲರಲ್ಲೂ ಇತ್ತು.
ಈ ಹಿಂದೆ ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ ಸಮುದಾಯ ಸೇರಿಸಿಕೊಂಡು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಇದೇ ಯಡಿಯೂರಪ್ಪ ಅವರು ಅಮಿತ್ ಶಾಗೆ #Amith Shah ದೂರು ನೀಡಿದರು. ಆಗ ಅಮಿತ್ ಶಾ ಬಿಟ್ಟು ಬಿಡು ಎಂದರು ಅದನ್ನು ಬಿಟ್ಟೆ. ಬಳಿಕ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ ಯಡಿಯೂರಪ್ಪ ಅವರಿಗೆ ನೀನೇ ಸರಿಯಾದ ಉತ್ತರ ಕೊಡಬೇಕು ಎಂದು ವರಿಷ್ಠರು ಹೇಳಿದಾಗ ಅವರ ಸೂಚನೆಯಂತೆ ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯಾಧ್ಯಕ್ಷನಾದೆ. ಮೊನ್ನೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣೆಯಲ್ಲಿ ನಿಲ್ಲಬೇಡ ಎಂದಾಗ 5 ನಿಮಿಷದಲ್ಲಿ ಪತ್ರ ಬರೆದು ಚುನಾವಣೆಯಿಂದ ಹಿಂದೆ ಸರಿದೆ ಎಂದರು.
ಮೋದಿ #Modi ಅವರು ಕಾಂಗ್ರೆಸ್ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುತ್ತಿರುವ ಸನ್ನಿವೇಶದಲ್ಲಿ ಇಲ್ಲಿ ಯಡಿಯೂರಪ್ಪ ಅವರು ಒಬ್ಬ ಮಗನನ್ನು ಸಂಸದನ್ನಾಗಿ ಮಾಡಿ, ಇನ್ನೊಬ್ಬ ಮಗನನ್ನೂ ಶಾಸಕ ಹಾಗೂ 6 ತಿಂಗಳು ಕಾಯಿಸಿ ಹಠ ಮಾಡಿ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದಾರೆ. ದೇಶದಲ್ಲಿ ಇತಿಹಾಸದಲ್ಲಿ ಹೀಗೆ ಆಗಿರಲಿಲ್ಲ. ಕುಟುಂಬ ರಾಜಕಾರಣವನ್ನು ವಿರೋಧಿಸಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ.
ನಾನು ಸ್ಪರ್ಧೆ ಮಾಡುತ್ತೇನೆ ಎಂದಾಗ ಈಶ್ವರಪ್ಪ ಸ್ಪರ್ಧೆ ಮಾಡಲ್ಲ, ನಾಮಪತ್ರ ಸಲ್ಲಿಸಲ್ಲ ಎಂದು ಅಪ್ಪ-ಮ್ಕಕಳು ಇದೇ ರೀತಿ ಅಪಪ್ರಚಾರ ಮಾಡಿಕೊಂಡು ಬಂದರು. ಆದರೆ, ಹಲವರು ನನ್ನ ಸಿದ್ದಾಂತವನ್ನು ಮೆಚ್ಚಿದರು. 35 ವರ್ಷ ಪಕ್ಷಕ್ಕಾಗಿ ದುಡಿದ ವ್ಯಕ್ತಿ ಈಗ ಬಿಜೆಪಿ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದರೆ ಪಕ್ಷದಲ್ಲಿ ಎಷ್ಟು ಸಮಸ್ಯೆಗಳಿಗೆ ಎಂದು ಅರ್ಥ ಮಾಡಿಕೊಳ್ಳಿ, ದಯವಿಟ್ಟು ಎಲ್ಲರೂ ಈಶ್ವರಪ್ಪ ಅವರಿಗೆ ವೋಟು ಕೊಡಿ ಎಂದು ನಂಜುಂಡ ಶೆಟ್ಟಿ ಅವರು ನನ್ನ ಪರ ಮನವಿ ಮಾಡಿದ್ದಾರೆ ಎಂದರು.
ಹೋದೆಡೆಯೆಲ್ಲಾ ಬೆಂಬಲ
ನಾನು ಯಾವ ಊರಿಗೆ ಹೋದರು ಜನ ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಇವತ್ತೆ ಚುನಾವಣೆ ನಡೆದರೆ ಒಂದು ಲಕ್ಷ ಮತ ಅಂತರದಲ್ಲಿ ಗೆಲ್ಲುತ್ತೇನೆ. ಈ ವಿಶ್ವಾಸ ಇದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ 35 ಸಾವಿರ ಜನ ಬರುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದರು.
ನಾಮಪತ್ರ ಬಳಿಕ ಶ್ರೀಧರಾಶ್ರಮಕ್ಕೆ ಹೋಗಿ ಅಲ್ಲಿ ಸ್ವಾಮೀಜಿ ಆಶೀರ್ವಾದ ಪಡೆಯುವ ಸಂದರ್ಭ ದೇವರಿಗೆ ಪೂಜೆ ಮಾಡಿ ಸ್ಕ್ರೀನ್ ತೆಗೆಯುವ ಸಂದರ್ಭದಲ್ಲಿ ಅರ್ಚಕರು ಹೊರ ಬಂದು ನಿಮಗೆ ಜಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಆಗ ನನಗೆ ಆಶ್ವರ್ಯವಾಯಿತು. ಹೀಗೆ ಎಲ್ಲ ಮಠಕ್ಕೂ ಹೋಗಿ ಬಂದೆ ಎಲ್ಲ ಮಠದ ಸ್ವಾಮೀಜಿಗಳು ನೀನು ಹಿಂದು ಪರ ಕೆಲಸ ಮಾಡುತ್ತಿದ್ದೀಯಾ ನಿನಗೆ ಒಳ್ಳೆದಾಗುತ್ತದೆ ಎದು ಆಶೀರ್ವಾದ ಮಾಡಿದರು ಎಂದರು.
ಭೀಮನಕಟ್ಟೆ ಮಠಕ್ಕೆ ನನ್ನ ಬೆಂಬಲಗರು ಹೋಗಿದ್ದಾಗ ಸ್ವಾಮೀಜಿ ಈಶ್ವರಪ್ಪ ಮೋದಿ ವಿರುದ್ಧ ನಿಲ್ಲುತ್ತಾರಾ? ಬಿಜೆಒ ಬಿಡುತ್ತಾರಾ ಎಂದು ಕೇಳಿದಾಗ ಅವರು ಬಿಜೆಪಿ ಬಿಡಲ್ಲ. ಚುನಾವಣೆ ಮುಗಿದ ಮೇಲೆ ಅವರು ಮತ್ತೆ ಬಿಜೆಪಿಗೆ ಬರುತ್ತಾರೆ. ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತಾರೆ ಎಂದು ವಿವರಿಸಿದಾಗ ಸ್ವಾಮೀಜಿ ನನಗೆ ಆಶೀರ್ವಾದ ಮಾಡಿ ನನ್ನ ನಾಮಪತ್ರ ಸಲ್ಲಿಕೆಗೆ ಒಂದು ಸಾವಿರ ರೂ. ದೇಣಿಗೆ ಕೊಟ್ಟು ಕಳುಯಿಸಿದ್ದಾರೆ ಎಂದರೆ ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದನೋ ಗೊತ್ತಿಲ್ಲ ಎಂದರು.
ಲಿಂಗಾಯತ ಸ್ವಾಮೀಜಿಗಳ ಬಳಿ ಹೋಗಿ ಆಶೀರ್ವಾದ ಪಡೆದು ಬಂದ ನಂತರ ಇಲ್ಲಿಂದ ಅವರಿಗೆ ಕರೆ ಮಾಡಿ ಏನ್ರಿ…ಯಾವುದೋ ಜಾತಿಯವರಿಗೆ ಆಶೀರ್ವಾದ ಮಾಡುತ್ತಿರಾ ಎಂದು ಬೆದರಿಕೆ ಹಾಕಿದ್ದಾರೆ. ನನಗೆ ಲಿಂಗಾಯಿತರು, ವೀರಶೈವರು ಸೇರಿದಂತೆ ಎಲ್ಲ ಸಮುದಾಯದವರು ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಸುಮಾರು ಶೇ.60ರಷ್ಟು ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್, ಜೆಡಿಎಸ್ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ನಾನು ಯಾವ ವಿಚಾರ ಇಟ್ಟುಕೊಂಡು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೋ ಅದಕ್ಕೆ ಎಲ್ಲರು ಬೆಂಬಲ ಸಿಗುತ್ತಿರುವುದು ನೋಡಿದರೆ ನೂರಕ್ಕೆ ನೂರು ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿಸಿದೆ ಎಂದರು.
ನಗರದ ವಿಪ್ರ ಟ್ರಸ್ಟ್ ವಿಪ್ರ ಮಹಿಳೆಯರಿಂದ ನಡೆದ ಕಾರ್ಯಕ್ರಮದಲ್ಲಿ ರಮೇಶ್ ಹೊಯ್ಸಳ ಸಹಕಾರ ಸಂಘದ ಸದಸ್ಯ ಉಮಾ ಮೂರ್ತಿ ವಿಜಯ ಲಕ್ಷ್ಮಿ ಹೊಯ್ಸಳ ಕರ್ನಾಟಕ ಸಂಘದ ಮಹಿಳಾ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post