ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹತ್ವದ ಬೆಳವಣಿಗೆಯಲ್ಲಿ ನಗರದ ಪ್ರತಿಷ್ಠಿತ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಹಿಂದಿ ವಿಷಯದ ಅರೆಕಾಲಿಕ ಉಪನ್ಯಾಸಕಿಯಾಗಿದ್ದ ಎಚ್.ಎಸ್. ವಿಜಯಲಕ್ಷ್ಮಿ ಅವರನ್ನು ಪೂರ್ಣಕಾಲಿಕ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಮಿತಿಗೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತಂತೆ ಮಹತ್ವದ ಆದೇಶ ಹೊರಡಿಸಿರುವ ರಾಜ್ಯ ಉಚ್ಛ ನ್ಯಾಯಾಲಯ, ಮುಂದಿನ ಮೂರು ತಿಂಗಳೊಳಗಾಗಿ ಈ ಆದೇಶವನ್ನು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎಚ್.ಎಸ್. ವಿಜಯಲಕ್ಷ್ಮಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ಶಿಕ್ಷಕರು ಮತ್ತು ಉಪನ್ಯಾಸಕರ ವಿಚಾರದಲ್ಲಿ ರಾಜ್ಯ ಸರ್ಕಾರ ಬಹಳ ಜಾಗರೂಕ ಹೆಜ್ಜೆ ಇಡಬೇಕು ಎಂದು ಕಿವಿ ಮಾತು ಹೇಳಿದೆ.
Also read: ಶಿವಮೊಗ್ಗ | ಜೂನ್ 24 | ರೈತರ ಬೃಹತ್ ಸಮಾವೇಶ | ಏನೆಲ್ಲಾ ವಿಷಯ ಚರ್ಚೆಯಾಗಲಿದೆ?
ಪ್ರಕರಣದ ಹಿನ್ನೆಲೆಯೇನು?
ಶಿವಶಂಕರ ಭಟ್ಟ ಅವರ ನಿವೃತ್ತಿಯಿಂದ ಹಿಂದಿ ಭಾಷೆಯ ಉಪನ್ಯಾಸಕ ಹುದ್ದೆ ಖಾಲಿ ಇತ್ತು. ಆ ಹುದ್ದೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯು ವಿಜಯಲಕ್ಷ್ಮಿ ಅವರನ್ನು 1996ರ ಜೂನ್ 1ರಂದು ಅರೆಕಾಲಿಕ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಂಡಿತ್ತು. ವಾರಕ್ಕೆ 16ಗಂಟೆಗಳ ಕಾರ್ಯಭಾರದಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ ಏಕಸದಸ್ಯ ನ್ಯಾಯಪೀಠ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕಾಲೇಜು ಶಿಕ್ಷಣ) ನಿಯಮ 2003ನ್ನು ಸರಿಯಾಗಿ ಗ್ರಹಿಸದೆ ಅರ್ಜಿದಾರರನ್ನು ಪೂರ್ಣಕಾಲಿಕ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದು ಸರಿಯಲ್ಲ. ನಿಯಮ 3ರಂತೆ ಸುಧೀರ್ಘ ಅವಧಿಯ ವರೆಗೆ ಅರ್ಜಿದಾರರು ಸಲ್ಲಿಸಿರುವ ಸೇವೆಯನ್ನು ಅನುದಾನಿತ ಸಂಸ್ಥೆಗಳಲ್ಲಿ ಬಳಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post