ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಗತ್ತು ಇನ್ನೂ ನಿದ್ರಿಸುತ್ತಿರುವಾಗಲೇ ಭಾರತ ಎದ್ದು ನಡೆಯಲಾರಂಭಿಸಿತ್ತು. ಅಂದರೆ ಜಗತ್ತಿನ ನಾಗರಿಕತೆ ಬೆಳೆಯುವ ಮುನ್ನವೇ ಭಾರತ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿತ್ತು ಎಂದು ನಂದನ್ ಕೆ. ಕೌಡಿಕಿ ಅಭಿಪ್ರಾಯಪಟ್ಟರು
ನಗರದ ಪ್ರತಿಷ್ಠಿತ ಪೇಸ್ ಪಿಯು ಕಾಲೇಜಿನಲ್ಲಿ ಸಂಸ್ಕೃತೋತ್ಸವ ಆಚರಿಸಲಾಯಿತು. ಸಂಸ್ಕೃತದಲ್ಲಿ ವಿಜ್ಞಾನ ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ವಿಜ್ಞಾನದ ಎಲ್ಲಾ ವಿಭಾಗಗಳಲ್ಲಿ ಭಾರತೀಯರು ಸಂಶೋಧನೆ ನಡೆಸಿದ್ದರು. ಈಗ ಪಾಶ್ಚಾತ್ಯರು ಹೇಳಿರುವ ಅನೇಕ ಸಂಗತಿಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ತಿಳಿದಿದ್ದರು. ವೇದ, ಉಪನಿಷತ್ತನ ಮಂತ್ರಗಳ ರೂಪದಲ್ಲಿ ಸಂಸ್ಕೃತದಲ್ಲಿ ರಚಿತವಾಗಿ ಇರಿಸಿದ್ದರಿಂದ ಎಲ್ಲ ಜನರಿಗೂ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಿತ್ತು. ಮುಂದುವರೆದಂತೆ ಸಂಸ್ಕೃತ ಎಲ್ಲರಿಗಾಗಿ ಎಂದಾದಾಗ ಅವುಗಳ ಮೇಲೆ ಮತ್ತೆ ಬೆಳಕು ಚೆಲುವ ಪ್ರಯತ್ನವಾಯಿತು ಎಂದರು.
ವಿಜ್ಞಾನದ ಹಲವು ಶಾಖೆಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ ಮೊದಲಾದವುಗಳಲ್ಲಿನ ಸಂಸ್ಕೃತ ವೈಜ್ಞಾನಿಕ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಭೌತಶಾಸ್ತ್ರದ ಆಪ್ಟಿಕ್ಸ್, ರಸಾಯನಶಾಸ್ತ್ರದ ಪರ್ಮುಟೇಶನ್ ಕಾಂಬಿನೇಷನ್, ಜೀವಶಾಸ್ತ್ರದ ಮಾನವನ ವಿಕಾಸ ಇತ್ಯಾದಿ ಎಲ್ಲಾ ಅಂಶಗಳನ್ನು ಸಹ ಸಂಸ್ಕೃತ ಶ್ಲೋಕಗಳಲ್ಲಿ ಹೇಗೆ ತಿಳಿಸಿದ್ದಾರೆ ಎನ್ನುವುದನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ. ಎನ್ ವಿಶ್ವನಾಥಯ್ಯನವರು ಸಂಸ್ಕೃತದ ಆಯ್ಕೆಯೊಂದಿಗೆ ಕೇವಲ ಅಂಕಗಳಿಕೆ ಅಷ್ಟೇ ಅಲ್ಲ ಜ್ಞಾನವೃದ್ಧಿಯೂ ಸಾಧ್ಯವಿದೆ. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ನಂದನ್ ಕಳೆದ ವರ್ಷ ದ್ವಿತೀಯ ಪಿಯು ಪೂರೈಸಿದ ವಿದ್ಯಾರ್ಥಿಯಾಗಿ ಪಿಯು ಹಾಗೂ ಜೆಇಇಯಲ್ಲೂ ಉತ್ತಮ ಸಾಧನೆಯನ್ನು ಮಾಡಿದವರಾಗಿದ್ದರು. ಹಾಗಾಗಿ ನೀವು ಸಹ ಇದನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಸಂಸ್ಕೃತ ಉಪನ್ಯಾಸಕಿಯಾದ ಡಾ. ಮೈತ್ರೇಯಿ ಹೆಚ್ ಎಲ್ ಎಲ್ಲರನ್ನೂ ಸ್ವಾಗತಿಸಿದರೆ, ಚಿ. ಚೈತನ್ಯ ಎಲ್ಲರನ್ನೂ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















